ಉದ್ಯೋಗ ನಿಧಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮ

KannadaprabhaNewsNetwork |  
Published : Oct 15, 2026, 03:00 AM IST
(ಫೋಟೊಬಿಕೆಟಿ1, ಜಿಲ್ಲಾಧಿಕಾರಿ ಸಂಗಪ್ಪ ಅವರು ಉದ್ಯೋಗ ನಿಧಿ ಯೋಜನೆ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆಉದ್ಯೋಗ ನಿಧಿ ಯೋಜನೆಯಡಿ ಆಯ್ಕೆಯಾದ 11 ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆಯು ಒಂದಾಗಿದ್ದು, ಜಿಲ್ಲೆಯಲ್ಲಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉದ್ಯೋಗ ನಿಧಿ ಯೋಜನೆಯಡಿ ಆಯ್ಕೆಯಾದ 11 ಜಿಲ್ಲೆಗಳಲ್ಲಿ ಬಾಗಲಕೋಟೆ ಜಿಲ್ಲೆಯು ಒಂದಾಗಿದ್ದು, ಜಿಲ್ಲೆಯಲ್ಲಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಉದ್ಯೋಗ ನಿಧಿ ಯೋಜನೆ ಅನುಷ್ಠಾನ ಕುರಿತು ಜರುಗಿದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆ ಹಾಗೂ ಖಾಸಗಿ ಹೂಡಿಕೆ ಹೆಚ್ಚಿಸುವುದು ಮತ್ತು ಸ್ಥಳೀಯ ಯುವಕರಿಗೆ ಸುಸ್ಥಿರ ಉದ್ಯೋಗಾವಕಾಶ ಸೃಷ್ಠಿಸುವ ಉದ್ದೇಶದಿಂದ ಪ್ರೊ.ಎಂ.ಗೋವಿಂದ ರಾವ್ ಸಮಿತಿಯ ವರದಿ ಮತ್ತು ಶಿಫಾರಸುಗಳ ಆಧಾರದ ಮೇಲೆ ರಾಜ್ಯದ 11 ಕಡಿಮೆ ಅಭಿವೃದ್ದಿ ಹೊಂದಿದ ಜಿಲ್ಲೆಗಳಲ್ಲಿ ಉದ್ಯೋಗ ನಿಧಿ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸುತ್ತಿದೆ ಎಂದರು.

ಈ ಯೋಜನೆಯಡಿ ಹೊಸ ಉದ್ಯೋಗ ಸೃಷ್ಟಿಸುವ ಅರ್ಹ ಉದ್ಯಮಿಗಳು, ಕೈಗಾರಿಕೆಗಳಿಗೆ ಪ್ರತಿ ಉದ್ಯೋಗ ಸೃಷ್ಠಿಗೆ ಮಾಸಿಕ ಉದ್ಯೋಗ ಪ್ರೋತ್ಸಾಹಧನವಾಗಿ ₹2,500ಗಳಂತೆ ಗರಿಷ್ಠ 24 ತಿಂಗಳವರೆಗೆ ನೀಡಲಾಗುತ್ತದೆ. ವಾರ್ಷಿಕವಾಗಿ ಸುಮಾರು 4550 ಉದ್ಯೋಗ ಸೃಷ್ಠಿಸುವ ಗುರಿ ಇದ್ದು, ಯೋಜನೆಯ ಮಾರ್ಗಸೂಚಿಯನ್ವಯ ಯೋಜನೆ ಅನುಷ್ಠಾನಗೊಳಿಸಬೇಕಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಅನುಷ್ಠಾನ ಸಮಿತಿ ರಚಿಸಲಾಗುತ್ತಿದ್ದು, ಈ ಸಮಿತಿಗೆ ಜಿಲ್ಲೆಯ ಪ್ರಮುಖ ಕೈಗಾರಿಕಾ ಸಂಘಗಳ ಗರಿಷ್ಟ ಇಬ್ಬರು ಪ್ರತಿನಿಧಿಗಳನ್ನು ಸದಸ್ಯರಾಗಿ ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆರಂಭದಲ್ಲಿ ಯೋಜನೆಯ ವ್ಯಾಪ್ತಿಯಿಂದ ಬಾಗಲಕೋಟೆ ಜಿಲ್ಲೆ ಕೈಬಿಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ವಿಜಯಾನಂದ ಕಾಶಪ್ಪನವರ ಜಿಲ್ಲೆಯ ಆರ್ಥಿಕ ಪರಿಸ್ಥಿತಿ, ಕೈಗಾರಿಕಾ ಸಾಮರ್ಥ್ಯ ಹಾಗೂ ಸ್ಥಳೀಯ ಯುವಕರ ಉದ್ಯೋಗದ ಅಗತ್ಯವನ್ನು ಮುಖ್ಯ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯನ್ನು ಯೋಜನೆಗೆ ಸೇರ್ಪಡೆ ಮಾಡಲಾಗಿದೆ. ಆದ್ದರಿಂದ ಈ ಭಾಗದ ಯುವಕರಿಗೆ ಪ್ರಯೋಜನ ದೊರೆಯುವಂತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಮಾತನಾಡಿ, ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿತ ಉತ್ಪಾದನಾ ವಲಯ ಮತ್ತು ಸೇವಾ ವಲಯಕ್ಕೆ ಸೇರಿದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಯೋಜನೆ ಜಾರಿಗೆ ಬಂದ ದಿನಾಂಕದ ನಂತರ ಹಾಲಿ ಇರುವ ಉದ್ದಿಮೆಗಳು ಹಾಗೂ ಹೊಸದಾಗಿ ಪ್ರಾರಂಭವಾಗುವ ಉದ್ಯಮಗಳು ಸೃಷ್ಟಿಸುವ ಹೊಸ, ಹೆಚ್ಚುವರಿ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗಲಿದೆ. 18 ರಿಂದ 45 ವರ್ಷದೊಳಗಿದ್ದು, ಅರ್ಹ ಉದ್ದಿಮೆಗಳು ಉದ್ಯೋಗ ನಿಧಿ ಪೋರ್ಟಲ್‌ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ನಿರುದ್ಯೋಗಿ ಯುವಕ, ಯುವತಿಯರು ನೇರವಾಗಿ ವಾಸಸ್ಥಳ ದೃಢೀಕರಣ ಪತ್ರ, ಆಧಾರ್‌ ಕಾರ್ಡ್ ಇಲ್ಲವೇ ಚುನಾವಣಾ ಗುರುತಿನ ಚೀಟಿ ದಾಖಲಾತಿಗಳೊಂದಿಗೆ ಉದ್ಯೋಗ ಪಡೆಯಲು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ದಿ ಅಧಿಕಾರಿ ಹಿರೇಮಠ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸಂತೋಷ ಚಾರಖಾನಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಕಿರಣ ಮಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಕುಸ್ತಿ: ಬೆಳಗಾವಿ ತಂಡ ಮೇಲುಗೈ
ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ