ಐದು ಸಾವಿರ ಮಂದಿಗೆ ಸಾಮಾಜಿಕ ಭದ್ರತೆ ಒದಗಿಸಲು ಕ್ರಮ: ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Nov 19, 2026, 01:15 AM IST
18ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ವಯೋವೃದ್ಧರು ಹಾಗೂ ವಿಧವೆಯರಿಂದ ಅಹವಾಲು ಆಲಿಸಿದರು. | Kannada Prabha

ಸಾರಾಂಶ

ವಯಸ್ಸಾದಂತೆ ದುಡಿಯುವ ಶಕ್ತಿ ಕುಂದುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಿ ಜೀವನದ ಸಂಧ್ಯಾಕಾಲ ತಲುಪಿದ ಹಿರಿಯರಿಗೆ ಆರ್ಥಿಕ ಸಂಕಷ್ಟ ಎದುರಾಗುವುದು ಸಹಜ. ಅದೇ ರೀತಿ ಪತಿಯನ್ನು ಕಳೆದುಕೊಂಡು ಕುಟುಂಬದ ಆಧಾರದವಿಲ್ಲದೆ ಜೀವನ ಸಾಗಿಸುವ ವಿಧವೆಯರಿಗೂ ಬದುಕಿನ ನಿರ್ವಹಣೆ ಸವಾಲಾಗುತ್ತದೆ.

ಕನ್ನಡಪ್ರಭ ವಾರ್ತೆ ರಾಮನಗರ

ವೃದ್ಧಾಪ್ಯ ಮತ್ತು ವಿಧವಾ ವೇತನದಂಥ ಸಾಮಾಜಿಕ ಭದ್ರತಾ ಯೋಜನೆಗಳು ಅಸಹಾಯಕರ ಬದುಕಿಗೆ ಆಸರೆಯಾಗಿವೆ. ಕೆಲ ಕಾರಣಗಳಿಂದ ವಂಚಿತರಾದವರನ್ನು ಫಲಾನುಭವಿಗಳನ್ನಾಗಿ ಮಾಡಲು ಒಂದೇ ಸೂರಿನಡಿ ಅಗತ್ಯ ದಾಖಲೆಗಳನ್ನು ಒದಗಿಸಲು ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ತಾಲೂಕಿನ ಕೈಲಾಂಚ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಒಂದೇ ಸೂರಿನಡಿ ವಯೋವೃದ್ದರಿಗೆ ಅಗತ್ಯ ಸೇವೆ ಒದಗಿಸುವ ವಿನೂತನ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿವಿಧ ಕಾರಣಗಳಿಂದ ವೃದ್ದಾಪ್ಯ, ವಿಧವಾ ವೇತನಗಳು ಪಾವತಿಯಾಗದ ರಾಮನಗರ ಕ್ಷೇತ್ರದ ಸುಮಾರು 5 ಸಾವಿರ ಫಲಾನುಭವಿಗಳಿಗೆ ಒಂದೇ ಸೂರಿನಡಿ ಅಗತ್ಯ ದಾಖಲೆಗಳನ್ನು ಕೊಡಿಸಲು ಕ್ರಮ ವಹಿಸಲಾಗಿದೆ ಎಂದರು.

ವಯಸ್ಸಾದಂತೆ ದುಡಿಯುವ ಶಕ್ತಿ ಕುಂದುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಿ ಜೀವನದ ಸಂಧ್ಯಾಕಾಲ ತಲುಪಿದ ಹಿರಿಯರಿಗೆ ಆರ್ಥಿಕ ಸಂಕಷ್ಟ ಎದುರಾಗುವುದು ಸಹಜ. ಅದೇ ರೀತಿ ಪತಿಯನ್ನು ಕಳೆದುಕೊಂಡು ಕುಟುಂಬದ ಆಧಾರದವಿಲ್ಲದೆ ಜೀವನ ಸಾಗಿಸುವ ವಿಧವೆಯರಿಗೂ ಬದುಕಿನ ನಿರ್ವಹಣೆ ಸವಾಲಾಗುತ್ತದೆ. ವಿಶೇಷ ಚೇತನರ ಬದುಕು ಸವಾಲಿನಿಂದ ಕೂಡಿರುತ್ತದೆ. ಇಂತಹ ಅಸಹಾಯಕ ವರ್ಗಗಳ ಜನರ ಬದುಕಿಗೆ ನೆರವಾಗುವ ಉದ್ದೇಶದಿಂದ ಅಂದಿನ ಪ್ರಧಾನಿ ಇಂದಿರಾಗಾಂಧಿರವರು ಜಾರಿಗೊಳಿಸಿರುವ ವೃದ್ಧಾಪ್ಯ, ವಿಧವಾ ಹಾಗೂ ವಿಶೇಷ ಚೇತನ ವೇತನ ಯೋಜನೆಗಳು ಸಾಮಾಜಿಕ ಭದ್ರತೆಯ ಪ್ರಮುಖ ಆಸರೆಯಾಗಿವೆ ಎಂದು ಹೇಳಿದರು. ಕರ್ನಾಟಕದಲ್ಲಿ 18 ಲಕ್ಷ ಜನರಿಗೆ ಕೆಲವು ನೂನ್ಯತೆಗಳ ಕಾರಣದಿಂದ ಸಾಮಾಜಿಕ ಭದ್ರತಾ ಯೋಜನೆಗಳು ನಿಂತು ಹೋಗಿತ್ತು. ಆಧಾರ್ ಕಾರ್ಡ್, ತೆರಿಗೆ ಪಾವತಿದಾರ ರೊಂದಿಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಜೋಡಣೆ, ಆದಾಯ ಹೆಚ್ಚಳದ ಕಾರಣ ವೇತನ ನಿಂತು ಹೋಗಿತ್ತು. ಇದನ್ನು ಮನಗಂಡು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನೂನ್ಯತೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಒಂದೇ ಸೂರಿನಡಿ ಮೂವರು ವೈದ್ಯರ ತಂಡ, ಕಂದಾಯ ಅಧಿಕಾರಿಗಳು ಕುಳಿತು ಸಮಸ್ಯೆ ಸರಿಪಡಿಸುವ ಮೂಲಕ ವಯೋವೃದ್ಧರು, ವಿಧವೆಯವರು ಹಾಗೂ ವಿಶೇಷ ಚೇತನರಿಗೆ ಮಾಸಿಕ ಪಿಂಚಣಿ ಮತ್ತೆ ಅವರಿಗೆ ಸಿಗಬೇಕೆಂಬ ಆಶಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಅಧ್ಯಕ್ಷ ವಿ.ಎಚ್.ರಾಜು ಮಾತನಾಡಿ, ಈ ಹಿಂದೆ ನಾವು ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಕಚೇರಿಗಳನ್ನು ಸುತ್ತಾಡುವ ಪರಿಸ್ಥಿತಿ ಕ್ಷೇತ್ರದಲ್ಲಿತ್ತು. ಎಚ್.ಎ.ಇಕ್ಬಾಲ್ ಹುಸೇನ್ ಅವರು ಶಾಸಕರಾದ ನಂತರ ಜನರ ಬಳಿಗೆ ಬಂದು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಾ ಪ್ರತಿನಿತ್ಯ ಕ್ಷೇತ್ರದ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ನಾವೆಲ್ಲರೂ ಅವರ ಬೆಂಬಲಕ್ಕೆ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಉಮಾ ಮಾತನಾಡಿ, ಕೈಲಂಚಾ ಹೋಬಳಿಯಲ್ಲಿ ವೃದ್ಧಾಪ್ಯ ವೇತನ ಪಲಾನುಭವಿಗಳಿಗೆ ನೆರವಾಗುವಂತೆ ಶಾಸಕರ ಮಾರ್ಗದರ್ಶನದಂತೆ ಆರೋಗ್ಯ ಇಲಾಖೆ ವತಿಯಿಂದ 60 ವರ್ಷ ಮೇಲ್ಪಟ್ಟವರಿಗೆ ವಯಸ್ಸಿನ ದೃಢೀಕರಣ ನೀಡಿ ನೆರವಾಗುವ ಕೆಲಸ ಮಾಡುತ್ತಿದ್ದೇವೆ ಎಂದರು.

ಸಭೆಯಲ್ಲಿ ಕೆಆರ್ ಐಡಿಎಲ್ ನಿರ್ದೇಶಕ ಜಯರಾಮಯ್ಯ ಮಾತನಾಡಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ರವಿಕುಮಾರ್, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷ ಗಿರೀಶ್, ಬಿಡಿಸಿಸಿ ಬ್ಯಾಂಕ್ ನಾಮ ನಿರ್ದೆಶಿತ ಸದಸ್ಯ ಅಶ್ವತ್ಥ್, ಮುಖಂಡರಾದ ಗೌಡಯ್ಯನದೊಡ್ಡಿ ಕೃಷ್ಣಯ್ಯ, ರಘು, ದಾಸೇಗೌಡ, ಶಿವಲಿಂಗಯ್ಯ, ಮಹೇಶ್, ಗಿರಿ, ಸಿದ್ದು, ಮಲ್ಲೇಗೌಡ, ಸಂತೋಷ್, ಡಿಟಿ ರುದ್ರಮ್ಮ, ಆರ್ ಐ ಕೇಶವಮೂರ್ತಿ, ಪಿಡಿಓ ಕುಮಾರ್ ಮತ್ತಿತರರು ಹಾಜರಿದ್ದರು.

--

ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ 5,000 ಫಲಾನುಭವಿಗಳಿಗೆ ವೃದ್ಧಾಪ್ಯ, ವಿಧವಾ ವೇತನ ಪಾವತಿಯಾಗುತ್ತಿಲ್ಲ. ಹಾಗಾಗಿ ಒಂದೇ ಸೂರಿನಡಿ ಸಮಸ್ಯೆ ಬಗೆಹರಿಸಿ ಪರಿಹಾರ ಕಂಡು ಕೊಳ್ಳಲು ಹೋಬಳಿವಾರು ಫಲಾನುಭವಿಗಳಿಗೆ ನೆರವಾಗುವಂತೆ ಕ್ರಮ ವಹಿಸಲಾಗಿದೆ. ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಫಲಾನುಭವಿಗಳಲ್ಲಿ ಮನವಿ ಮಾಡುತ್ತೇನೆ.

- ಎಚ್.ಎ.ಇಕ್ಬಾಲ್ ಹುಸೇನ್, ಶಾಸಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ