ಚನ್ನಪಟ್ಟಣ: ಮಳೆಗಾಲದಲ್ಲಿ ಅಂತರ್ಜಲ ಮಟ್ಟ ಹೆಚ್ಚಿರುವುದರಿಂದ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗುತ್ತದೆ. ಆದರೆ ಮಳೆ ಕೊರತೆಯಾದಾಗ ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಕಾವೇರಿ ನೀರನ್ನು ಶುದ್ಧೀಕರಿಸಿ ಎಲ್ಲ ಪ್ರದೇಶಗಳಿಗೂ ಪೂರೈಸುವ ಯೋಜನೆಯನ್ನು ಸರ್ಕಾರದಿಂದ ಜಾರಿಗೊಳಿಸಲಾಗುತ್ತಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಇಡೀ ರಾಜ್ಯದಲ್ಲಿ ಬರ ಆವರಿಸಿದ್ದು ಇಂತಹ ಸಮಯದಲ್ಲೂ ನಿಮ್ಮೂರ ಕೆರೆಗೆ ನೀರು ಹರಿಯುತ್ತಿದೆ. ಇದನ್ನು ಅರಿತು ನೀರಿನ ಸದ್ಬಳಕೆಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ನ.೧ರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೮ ರು. ದರ ಹೆಚ್ಚಿಸಿ ಅದರಲ್ಲಿ ೭ ರು.ಗಳನ್ನು ಉತ್ಪಾದಕರಿಗೆ ನೀಡಲು ಮುಂದಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಹಾಲು ಪೂರೈಸುವ ತಾಲೂಕುಗಳಲ್ಲಿ ಚನ್ನಪಟ್ಟಣ ಪ್ರಮುಖವಾದದ್ದು, ಇದರಿಂದ ಸ್ಥಳೀಯ ರೈತರಿಗೆ ಆರ್ಥಿಕ ಲಾಭ ದೊರೆಯಲಿದೆ. ಅಲ್ಲದೆ ತಾಲೂಕಿನ ಕಣ್ವ ಬಳಿ ಬೃಹತ್ ಪಶು ಆಹಾರ ತಯಾರಿಕಾ ಘಟಕ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ಗ್ರಾಮೀಣರ ಜೀವನಮಟ್ಟ ಸುಧಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ನಿಗಮದ ಉಪಾಧ್ಯಕ್ಷ ಎಸ್.ಗಂಗಾಧರ್, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಕೋಡಂಬಳ್ಳಿ ಶಿವಮಾದು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬ್ಯಾಡರಹಳ್ಳಿ ರಾಮಚಂದ್ರು, ಶ್ಯಾನುಭೋಗನಹಳ್ಳಿ ಪ್ರದೀಪ್, ಪಟೇಲ್ ಶ್ರೀನಿವಾಸ್, ವಿರೂಪಾಕ್ಷಿಪುರ ಶ್ರೀನಿವಾಸ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಮೋಹನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಮುಖಂಡರು ಉಪಸ್ಥಿತರಿದ್ದರು.ಪೋಟೊ೩೦ಸಿಪಿಟಿ೧: