ಹುಬ್ಬಳ್ಳಿ:
ಇ-ಸ್ವತ್ತು ಎಲ್ಲ ಕೈಗಾರಿಕೋದ್ಯಮಿಗಳು ಅನುಭವಿಸುತ್ತಿರುವ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿನ ರವಿನಗರದ ಹೊಟೇಲ್ ಕ್ಲಾಸಿಕ್ ರೆಸಿಡೆನ್ಸಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಬುಧವಾರ ಟಿಆರ್‌ಇಡಿಎಸ್ ಯೋಜನೆ ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಸಣ್ಣ ಕೈಗಾರಿಕಾ ಉದ್ಯಮಿಗಳಿಂದ ಹಿಡಿದು ದೊಡ್ಡ ಕೈಗಾರಿಕಾ ಉದ್ಯಮಿಗಳ ವರೆಗೂ ವಾಣಿಜ್ಯ ತೆರಿಗೆ, ವಿವಿಧ ರೀತಿಯ ತೊಂದರೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.2014ರಿಂದ 2025ರ ವರೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಜಿಸಲಾಗಿರುವ ಎಂಎಸ್‌ಎಂಇ ಯೋಜನೆ ಮತ್ತು ಕೈಗಾರಿಕೋದ್ಯಮ ಅಭಿವೃದ್ಧಿಯಲ್ಲಿ ಬಹುದೊಡ್ಡ ಸಾಧನೆ ಮಾಡಲಾಗಿದೆ. ಎಂಎಸ್‌ಎಂಇ ಮತ್ತು ಹಲವು ರೀತಿಯ ಯೋಜನೆಗಳಿಂದ ದೇಶದ ಜಿಡಿಪಿಯು ಏರಿಕೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಆಧುನಿಕ ವ್ಯವಹಾರ ಪಾವತಿ ಉಪಕರಣಗಳಿಂದ ಸಮಯ ಉಳಿತಾಯದ ಜತೆಗೆ ಸಮಸ್ಯೆಗಳಿಲ್ಲದೆ ವ್ಯವಹಾರಗಳು ಸುಗಮವಾಗಿದೆ ಎಂದರು.
ಪ್ರತಿಯೊಬ್ಬ ಸಣ್ಣ ಕೈಗಾರಿಕೋದ್ಯಮದಿಂದ ಹಿಡಿದು ದೊಡ್ಡ ಕೈಗಾರಿಕಾ ಉದ್ಯಮಗಳು ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ವಿವಿಧ ರೀತಿಯ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕು ಎಂದ ಅವರು, ಕೈಗಾರಿಕಾ ಕ್ಷೇತ್ರದಲ್ಲಿ ಆಗುವ ಸಮಸ್ಯೆಯನ್ನು ಸದನದಲ್ಲಿ ಗಮನಕ್ಕೆ ತಂದಯ ಬಗೆಹರಿಸಲಾಗುವುದು ಎಂದು ಹೇಳಿದರು.ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್.ಎಚ್, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶಕುಮಾರ, ಪ್ಯಾನಲ್ ಮತ್ತು ಕಾಶಿಯಾ ಜಿಲ್ಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲೇಶ ಜಾಡರ ಸೇರಿದಂತೆ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.