ಗಂಗಾವತಿ ತಾಲೂಕಿನ ಆನೆಗೊಂದಿಯ ಬಳಿ ಶ್ರೀಕೃಷ್ಣದೇವರಾಯ ಸಮಾಧಿ ಮಂಟಪದಲ್ಲಿ ಮಾಂಸ ಶುದ್ಧೀಕರಣ

KannadaprabhaNewsNetwork | Updated : Apr 22 2025, 12:04 PM IST

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣ ದೇವರಾಯ ಅವರ ಸಮಾಧಿಯ 64 ಕಂಬಗಳ ಮಂಟಪದಲ್ಲಿ ಮಾಂಸ ಸುಲಿಯುತ್ತಿರುವ ವೀಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೊಪ್ಪಳ:  ವಿಜಯನಗರ ಸಾಮ್ರಾಜ್ಯದ ಅರಸು ಶ್ರೀಕೃಷ್ಣ ದೇವರಾಯ ಅವರ ಸಮಾಧಿಯ 64 ಕಂಬಗಳ ಮಂಟಪದಲ್ಲಿ ಮಾಂಸ ಸುಲಿಯುತ್ತಿರುವ ವೀಡಿಯೋ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗಂಗಾವತಿ ತಾಲೂಕಿನ ಆನೆಗೊಂದಿಯ ಬಳಿ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿರುವ ಶ್ರೀಕೃಷ್ಣ ದೇವರಾಯ ಸಮಾಧಿಯ 64 ಕಂಬಗಳ ಮಂಟಪೂ ತನ್ನದೇ ಆದ ಇತಿಹಾಸ ಹೊಂದಿದೆ. ಇಂಥ ಐತಿಹಾಸಿಕ ಸ್ಮಾರಕದಲ್ಲಿ ಸ್ಥಳೀಯರು ಕುರಿ, ಮೇಕೆಯ ಮಾಂಸ ಸುಲಿಯುವ ತಾಣವನ್ನಾಗಿ ಮಾಡಿಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಕುರಿತು ನಿರ್ಲಕ್ಷ್ಯ ವಹಿಸಿರುವ ಪ್ರಾಚ್ಯವಸ್ತು ಇಲಾಖೆಯ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದಾರೆ.

ಯತ್ನಾಳ ಆಕ್ರೋಶ:

ಈ ವೀಡಿಯೋ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರನಾಗಿದ್ದ ವಿಜಯನಗರ ಶ್ರೀಕೃಷ್ಣ ದೇವರಾಯ ಸಮಾಧಿಯ ದುಸ್ಥಿತಿ ಇದು. ಈ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಶ್ರೀಕೃಷ್ಣ ದೇವರಾಯ ಅವರಿಗೆ ಮಾಡಿದ ಅಪಮಾನ ಎಂದಿದ್ದಾರೆ.

ಹಿಂದೂ ದೇವಾಲಯಗಳನ್ನು ಕೆಡವಿ, ದೇಶದ ಸಂಪತ್ತು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯವಾಗಿ ಕೊಂದ ಔರಂಗಜೇಬನ ಸಮಾಧಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ. ಆದರೆ, ವಿಜಯನಗರ ಸಾಮ್ರಾಜ್ಯ ವಿಸ್ತರಿಸಿದ ಪರಾಕ್ರಮಿ, ಕಲೆ, ಸಾಹಿತ್ಯ, ರಂಗಗಳ ಪೋಷಕ ಶ್ರೀಕೃಷ್ಣ ದೇವರಾಯ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ. ಇದು ಕನ್ನಡಿಗರಿಗೆ ಅಷ್ಟೇ ಅಲ್ಲ, ರಾಷ್ಟ್ರಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಬಸನಗೌಡ ಪಾಟೀಲ ಯತ್ನಾಳ.

ಪುರಾತತ್ವ ಇಲಾಖೆ ಕ್ರಮ

ಆನೆಗೊಂದಿ ಪರಿಸರದಲ್ಲಿ 74 ರಾಜ್ಯ ಸಂರಕ್ಷಿತ ಸ್ಮಾರಕಗಳಿದ್ದು ಇದರಲ್ಲಿ ಶ್ರೀಕೃಷ್ಣ ದೇವರಾಯ ಸಮಾಧಿಯ 64 ಕಂಬಗಳ ಮಂಟಪವೂ ಒಂದು. ಈ ಸ್ಥಳದಲ್ಲಿ ಮಾಂಸವನ್ನು ಕತ್ತರಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸಲಾಗಿದೆ. ನಮ್ಮ ದಿನಗೂಲಿ ನೌಕರರಿಂದ ಸ್ವಚ್ಛ ಮಾಡಿಸಲಾಗಿದೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ. ಆರ್. ಶೇಜೀಶ್ವರ ತಿಳಿಸಿದ್ದಾರೆ.ಶ್ರೀಕೃಷ್ಣ ದೇವರಾಯ ಸಮಾಧಿಯ 64 ಕಂಬಗಳ ಮಂಟಪದಲ್ಲಿ ಮಾಂಸ ಕತ್ತರಿಸಿದ ಯುವಕ ತನಗೆ ಅರಿವಿಲ್ಲದಂತೆ ಮಾಡಿದ್ದಾನೆ. ಈ ಕುರಿತು ಈತನನ್ನು ಕರೆಯಿಸಿ ಕೇಳಿದಾಗ ಕ್ಷಮೆಯಾಚಿಸಿದ್ದಾನೆ. ಇನ್ಮುಂದೆ ಇಂಥ ಘಟನೆಗಳು ನಡೆಯದಂತೆ ಗ್ರಾಮ ಪಂಚಾಯಿತಿ ನಿಗಾ ವಹಿಸುತ್ತದೆ ಎಂದು ಆನೆಗೊಂದಿ ಪಿಡಿಒ ರವಿ ಕುಲಕರ್ಣಿ ಹೇಳಿದರು.

Share this article