ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸತ್ಯಕ್ಕೆ ಹತ್ತಿರವಾದ ಸುದ್ದಿಗಳಿಗೆ ಮಾತ್ರ ಜನಮನ್ನಣೆ ದೊರಕುತ್ತದೆ ಎಂದರು.
ಮಾಧ್ಯಮಗಳು ಜನರ ವಿಶ್ವಾಸಕ್ಕೆ ಹತ್ತಿರವಾಗಬೇಕು. ಜನರು ಮಾಧ್ಯಮಗಳನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಾರೆ. ಜನಸಾಮಾನ್ಯರಲ್ಲಿ ಇಂದು ಟಿವಿ ಹಾಗೂ ಪತ್ರಿಕೆಗಳ ಸುದ್ದಿಗಳನ್ನು ಅನುಮಾನದ ದೃಷ್ಠಿಯಿಂದ ನೋಡುವ ಪರಿಸ್ಥಿತಿ ಉಂಟಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವುದು ಸುಳ್ಳು ಎನ್ನುವ ಭಾವನೆ ಜನರಲ್ಲಿ ಮೂಡುತ್ತಿರುವುದು ಆತಂಕಕಾರಿಯಾಗಿದೆ ಎಂದರು.ಮುಖ್ಯ ವಾಹಿನಿ ಮಾಧ್ಯಮಗಳ ಜೊತೆಗೆ, ಸಾಮಾಜಿಕ ಮಾಧ್ಯಮಗಳು, ಯೂಟ್ಯೂಬ್‍ಗಳಲ್ಲಿಯೂ ಸುದ್ದಿಗಳು ಪ್ರಸಾರವಾಗುತ್ತಿದೆ. ಇವು ಮುಖ್ಯ ವಾಹಿನಿ ಮಾಧ್ಯಮಗಳಿಗೆ ಸಮಾನಾಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ಬದಲಾದ ಈ ಪರಿಸ್ಥಿತಿಯಿಂದ ಟಿವಿ ಹಾಗೂ ಪತ್ರಿಕಾ ಮಾಧ್ಯಮಗಳು ಹೊರಬರಬೇಕು. ವಸ್ತುನಿಷ್ಠ, ನಿಖರ ಹಾಗೂ ಸತ್ಯವಾದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಜನರ ನಂಬಿಕೆ ಗಳಿಸಬೇಕು. ಪತ್ರಿಕೆ ಮತ್ತು ಮಾಧ್ಯಮ ಪ್ರಜಾಪ್ರಭುತ್ವ ಹಾಗೂ ಸಮಾಜದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸರ್ಕಾರದ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕೆಲಸ ಮಾಡುತ್ತಿದೆ. ಜಿಲ್ಲೆ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಎಚ್ಚರಿಸುವ ಕೆಲಸ ಮಾಧ್ಯಮ ಮಾಡುತ್ತಿದೆ. ಈ ಬಾರಿ ಪತ್ರಿಕಾ ದಿನಾಚರಣೆ ತುಂಬಾ ವಿಶೇಷವಾಗಿ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು.
ವಿಧಾನಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಗತ್ಯ ಇರುವ ಸಲಕರಣೆಗಳನ್ನು ನೀಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ₹5 ಲಕ್ಷ ಅನುದಾನ ಮಂಜೂರು ಮಾಡಿರುವುದಾಗಿ ತಿಳಿಸಿದರು. ಜಿಲ್ಲೆ 157 ಪತ್ರಿಕಾ ವಿತರಕರಿಗೆ ರೇಡಿಯಂ ಸ್ಟಿಕರ್ ರಿಫ್ಲೆಕ್ಟರ್ ಹೊಂದಿರುವ ಜಾಕೇಟ್ ನೀಡುವುದಾಗಿ ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತಾಜ್‍ಪೀರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಕರ್ನಾಟಕ ಮಾಧ್ಯಮ ಅಕಾಡೆಮಿ ನೂತನ ಸದಸ್ಯ ಎಂ.ಎನ್.ಅಹೋಬಲ ಪತಿ, ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ ತುಕಾರಾಂರಾವ್, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಉಪಸ್ಥಿತರಿದ್ದರು.