ಸಂಗೀತಕ್ಕೆ ಪೋತ್ಸಾಹ ನೀಡುವುದರಿಂದ ಮನಸ್ಸಿಗೆ ತೃಪ್ತಿ

KannadaprabhaNewsNetwork | Updated : Oct 28 2024, 01:25 AM IST

ಸಾರಾಂಶ

ನಾಲ್ವಡಿ ಸ್ಟಾರ್‌ ಸಿಂಗರ್ಸ್‌ ತಂಡದಿಂದ ಗಾನಯಾನ

ಕನ್ನಡಪ್ರಭ ವಾರ್ತೆ ಮೈಸೂರು

ಸಂಗೀತಕ್ಕೆ ಪ್ರೋತ್ಸಾಹ ನೀಡುವುದರಿಂದ ಮನಸ್ಸಿಗೆ ತೃಪ್ತಿ ಉಂಟಾಗುತ್ತದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಭೈರಿ ಹೇಳಿದರು.

ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಅಲೆಯನ್ಸ್‌ ಕ್ಲಬ್‌ ಆಫ್‌ ಮೈಸೂರು ಸ್ಟಾರ್‌ ಸಿಂಗರ್ಸ್‌ ಉದ್ಘಾಟನೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದೇನೆ. ಆದರೆ ಸುಗಮ ಸಂಗೀತ ಪರಿಷತ್‌ ಸ್ಥಾಪಿಸಿಕೊಂಡು ಕಳೆದ ಏಳೆಂಟು ತಿಂಗಳಿಂದ ನಡೆಸುತ್ತಿರುವ ಚಟುವಟಿಕೆಗಳು ಮಾನಸಿಕವಾಗಿ ತೃಪ್ತಿ ನೀಡಿವೆ ಎಂದರು.

ಸುಗಮ ಸಂಗೀತ ಪರಿಷತ್‌ ವತಿಯಿಂದ ಖ್ಯಾತ ಗಾಯಕರನ್ನು ಕರೆಸಿ, ತರಬೇತಿ ಶಿಬಿರ ನಡೆಸಲಾಗಿದೆ. ಖ್ಯಾತ ಕವಿಗಳನ್ನು ಕರೆಸಿ ಕೂಡ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಿಂದ ಸಾಕಷ್ಟು ಯುವಪ್ರತಿಭೆಗಳು ಬೆಳಕೆಗೆ ಬರುತ್ತಿವೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗವಾಗಿ ಮಾಧ್ಯಮ ಕ್ಷೇತ್ರ ಬಹಳ ಮುಖ್ಯ, ಮಾಧ್ಯಮಗಳಿಲ್ಲದಿದ್ದರೆ ಸಮಾಜಕ್ಕೆ ಯಾವುದೇ ಸಂದೇಶಗಳು ಅಷ್ಟು ಸುಲಭವಾಗಿ ತಲುಪುದಿಲ್ಲ ಎಂದು ಅವರು ಹೇಳಿದರು.

ಮಾಧ್ಯಮ, ಕ್ರೀಡಾ ಹಾಗೂ ಯೋಗ ಕ್ಷೇತ್ರದ ಸಾಧಕರನ್ನು ಗುರುತಿಸಿ , ಪ್ರಶಸ್ತಿ ನೀಡಿರುವುದು ಉತ್ತಮ ಕಾರ್ಯ ಎಂದು ಅವರು ಶ್ಲಾಘಿಸಿದರು.

ನೇಗಿಲಯೋಗಿ ಸಂಸ್ಥೆಯ ಸಂಸ್ಥಾಪಕ ಡಿ.ರವಿಕುಮಾರ್‌ ಮಾತನಾಡಿ, ಮುಂದಿನ ಗಾನಯಾನ ಕಾರ್ಯಕ್ರಮವನ್ನು ತಮ್ಮ ಟ್ರಸ್ಟ್‌ ವತಿಯಿಂದ ಜಯನಗರದ ಮರಳೇಶ್ವರ ಭವನದಲ್ಲಿ ಆಯೋಜಿಸುವುದಾಗಿ ಪ್ರಕಟಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಪ್ರಶಸ್ತಿ ಪ್ರದಾನ ಮಾಡಿದರು. ಸಿದ್ಧಾರ್ಥನಗರ ಶಾಂತಲಾ ವಿದ್ಯಾಪೀಠದ ಕಾರ್ಯದರ್ಶಿ ಸಂತೋಷ್‌ ಕುಮಾರ್‌. ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಶೋಭಾರಾಣಿ ಮೊದಲಾದವರು ಇದ್ದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು. ಅಲೆಯನ್ಸ್‌ ಕ್ಲಬ್‌ ಆಫ್‌ ನಾಲ್ವಡಿ ಮತ್ತು ಸ್ಟಾರ್‌ ಸಿಂಗರ್ಸ್‌ ಅಧ್ಯಕ್ಷ ಎನ್. ಬೆಟ್ಟೇಗೌಡ ಸ್ವಾಗತಿಸಿದರು. ನಾಗಮಣಿ ವಿಜಯಕುಮಾರ್‌ ನಿರೂಪಿಸಿದರು.

ಗಾನಯಾನ

ಡಾ.ವೈ.ಡಿ. ರಾಜಣ್ಣ, ಎನ್‌. ಬೆಟ್ಟೇಗೌಡ, ಅಬ್ದುಲ್‌ ಖಯ್ಯಾಮ್‌, ಡಾ.ಪೂರ್ಣಿಮಾ, ಶ್ರೀಲತಾ, ಸಿ.ಎಸ್‌. ವಾಣಿ, ಗೀತಾಲಕ್ಷ್ಮಿ ಕಿಣಿ, ನಾಗಮಣಿ, ಸುಜಾತಾ, ನಾಗರತ್ನ ಅವರು ಗಾಯನ ಪ್ರಸ್ತುತಪಡಿಸಿದರು. ಬಾಕ್ಸ್‌...

ಪ್ರಶಸ್ತಿ ಪುರಸ್ಕೃತರು

ರಂಗನಾಥ್‌ ಮೈಸೂರು, ಆರ್‌. ಕೃಷ್ಣ, ಶ್ರೀಧರ್‌ ಆರ್‌. ಭಟ್ಟ, ಮಹದೇವಸ್ವಾಮಿ- ಎಲ್ಲರೂ ಮಾಧ್ಯಮರತ್ನ, ಎಸ್‌. ಜ್ಞಾನೇಶ್ವರ್‌ ಕ್ರೀಡಾರತ್ನ, ಗೀತಾ ಕುಮಾರ್‌- ಯೋಗರತ್ನ

---

Share this article