ವಿಶ್ವವೇ ಮೆಚ್ಚುವ ಮಹಾತ್ಮಾ ಗಾಂಧೀಜಿ ಮತ್ತು ಜ್ಞಾನ ಸಂಪನ್ನರಾದ ಡಾ.ಬಿ.ಆರ್. ಅಂಬೇಡ್ಕರ್ ತತ್ವಾದರ್ಶಗಳಂತೆ ನಾವೆಲ್ಲರೂ ಮನುಜರು ಎನ್ನುವ ವಿಶಾಲ ಚಿಂತನೆಗಳಡಿ ನಾವೆಲ್ಲರೂ ಕರ್ತವ್ಯ ಪರರಾಗಬೇಕೆಂದು ಸಮಾಜಸೇವಕ ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಬು ವರ್ಗಿಸ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಶ್ವವೇ ಮೆಚ್ಚುವ ಮಹಾತ್ಮಾ ಗಾಂಧೀಜಿ ಮತ್ತು ಜ್ಞಾನ ಸಂಪನ್ನರಾದ ಡಾ.ಬಿ.ಆರ್. ಅಂಬೇಡ್ಕರ್ ತತ್ವಾದರ್ಶಗಳಂತೆ ನಾವೆಲ್ಲರೂ ಮನುಜರು ಎನ್ನುವ ವಿಶಾಲ ಚಿಂತನೆಗಳಡಿ ನಾವೆಲ್ಲರೂ ಕರ್ತವ್ಯ ಪರರಾಗಬೇಕೆಂದು ಸಮಾಜಸೇವಕ ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಬು ವರ್ಗಿಸ್ ಕರೆ ನೀಡಿದರು.ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಬಿ. ಎಸ್. ಗೋಪಾಲಕೃಷ್ಣ ರಸ್ತೆಯಲ್ಲಿನ ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿತ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಪ್ರತಿಯೊಬ್ಬರು ಮೈಮುಚ್ಚುವಂತೆ ವಸ್ತ್ರ ತೊಡುವವರೆಗೂ ತಾನು ಅವರಂತೆಯೇ ಇರುವುದಾಗಿ ಬದುಕಿನುದ್ದಕ್ಕೂ ಅರೆಬೆತ್ತಲೆಯಾಗಿ ಬದುಕು ನಡೆಸಿದ ಮಹಾತ್ಮಾ ಗಾಂಧೀಜಿ ಹಾಗೂ ಹಲವಾರು ಪದವಿಗಳನ್ನು ಪಡೆದ ಡಾ.ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಸ್ಮರಿಸಿಕೊಳ್ಳಬೇಕು. ಅವರ ತತ್ವಾದರ್ಶ ಚಿಂತನೆಗಳಿಗೆ ತಕ್ಕಂತೆ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸುವವರು ಪ್ರಾಮಾಣಿಕವಾದ ಸೇವೆಯನ್ನು ಸಮಾಜಕ್ಕೆ ನೀಡುವಂತಾಗಲೆಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಅವರು, ರೆ.ಫಾ. ಹರ್ಮನ್ ಮೋಗ್ಲಿಂಗ್ ಅವರು 1834ರ ಜು.1 ರಂದು ಮಂಗಳೂರ ಸಮಾಚಾರ ಪತ್ರಿಕೆ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಈ ದಿನವನ್ನು ಪತ್ರ‍್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಜ್ಯವ್ಯಾಪಿ 1252 ಪತ್ರ‍್ರಿಕೆಗಳಿದ್ದು, ಇವುಗಳಲ್ಲಿ 540 ಪತ್ರ‍್ರಿಕೆಗಳು ದಿನಪತ್ರಿಕೆಗಳು ಹಾಗೂ ಪ್ರಾದೇಶಿಕ ಆವೃತ್ತಿಗಳಿವೆ. ಸುಮಾರು 84 ಪತ್ರಿಕೆಗಳು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿತೆಂದು ಬೇಸರ ವ್ಯಕ್ತಪಡಿಸಿದರು.
ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್, ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಜಿ.ವಿ. ರವಿ ಕುಮಾರ್ ಮಾತನಾಡಿದರು.
ಎಂಟು ಮಂದಿಗೆ ದತ್ತಿ ಪ್ರಶಸ್ತಿ ಪ್ರದಾನ: ವಾರ್ಷಿಕ ಅತ್ಯುತ್ತಮ ವರದಿ ಪ್ರಶಸ್ತಿ ವಿಜೇತರಾದ ಅಶ್ರಫ್ ಕರಡ, ಎಸ್ .ಜಿ. ಉಮೇಶ್, ಟಿವಿ 1 ವಾಹಿನಿಯ ಸೈಯದ್ ಇರ್ಫಾನ್, ಕುಡೆಕಲ್ ಸಂತೋಷ್, ಟಿ.ಜೆ. ಪ್ರವೀಣ್ ಕುಮಾರ್, ಡಿ.ಪಿ.ಲೋಕೇಶ್, ವಿನೋದ್ ಮೂಡಗದ್ದೆ, ಸುನಿಲ್ ಎಂ.ಎಸ್. ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಸಂಘದ ನಿರ್ದೇಶಕರಾದ ಟಿ.ಜೆ. ಪ್ರವೀಣ್ ಕುಮಾರ್ ಪ್ರಾರ್ಥಿಸಿ, ಸಂಘದ ನಿರ್ದೇಶಕರು ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.