ಕಕ್ಷಿದಾರರಿಗೆ, ವ್ಯಾಜ್ಯಗಳಿಗೆ ‘ಮಧ್ಯಸ್ಥಿಕೆ’ ಸಂಜೀವಿನಿ: ನ್ಯಾಯಮೂರ್ತಿ ಆರ್. ನಟರಾಜ್

KannadaprabhaNewsNetwork |  
Published : Sep 02, 2025, 12:00 AM IST
ಬಳ್ಳಾರಿ ಜಿಲ್ಲಾ ನ್ಯಾಯಾಲಯ  ಸಭಾಂಗಣದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ಆಯೋಜಿಸಿದ್ದ ‘ಮಧ್ಯಸ್ಥಿಕೆ’ ಕುರಿತ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೈಕೊರ್ಟ್ ನ ನ್ಯಾಯಾಧೀಶ ಆರ್‌.ನಟರಾಜ್ ಅವರು ಮಾತನಾಡಿದರು.  | Kannada Prabha

ಸಾರಾಂಶ

ಮಧ್ಯಸ್ಥಿಕೆ ಎಂಬುದು ಕಕ್ಷಿದಾರರಿಗೆ ಮತ್ತು ವ್ಯಾಜ್ಯಗಳಿಗೆ ಸಂಜೀವಿನಿಯಾಗಿದ್ದು, ಇದು ಎಂತಹದ್ದೇ ಪ್ರಕರಣವನ್ನು ಯಾವುದೇ ವೈರತ್ವ ಇಲ್ಲದಂತೆ ಪರಿಹರಿಸುವ ಉಪಾಯವಾಗಿದೆ.

ಮಧ್ಯಸ್ಥಿಕೆ ಕುರಿತು ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮಧ್ಯಸ್ಥಿಕೆ ಎಂಬುದು ಕಕ್ಷಿದಾರರಿಗೆ ಮತ್ತು ವ್ಯಾಜ್ಯಗಳಿಗೆ ಸಂಜೀವಿನಿಯಾಗಿದ್ದು, ಇದು ಎಂತಹದ್ದೇ ಪ್ರಕರಣವನ್ನು ಯಾವುದೇ ವೈರತ್ವ ಇಲ್ಲದಂತೆ ಪರಿಹರಿಸುವ ಉಪಾಯವಾಗಿದೆ ಎಂದು ಹೈಕೋರ್ಟ್‌ ನ್ಯಾಯಾಧೀಶರು ಹಾಗೂ ಬಳ್ಳಾರಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರೂ ಆಗಿರುವ ನ್ಯಾಯಮೂರ್ತಿ ಆರ್. ನಟರಾಜ್ ಹೇಳಿದರು.

ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯ ಸಂಕೀರ್ಣದ 1ನೇ ಮಹಡಿಯ ಸಭಾಂಗಣದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ಆಯೋಜಿಸಿದ್ದ ಮಧ್ಯಸ್ಥಿಕೆ ಕುರಿತು ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ವರ್ಚುವಲ್ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು. ಮಾನವನ ಶರೀರಕ್ಕೆ ಯಾವ ರೀತಿ ಕಾಯಿಲೆಗಳು ಬರುತ್ತವೆಯೋ ಅದೇ ರೀತಿ ಮಾನವ ಅತಿ ಆಸೆ, ದ್ವೇಷ, ಕೋಪ, ಅಸೂಯೆ ಹಾಗೂ ಸ್ವಾರ್ಥದಂತಹ ಮಾನಸಿಕ ಕಾಯಿಲೆಯಿಂದಲೂ ಬಳಲುತ್ತಾನೆ. ಯಾವ ರೀತಿ ವೈದ್ಯರು ರೋಗಿಗಳಿಗೆ ಪ್ರೀತಿ, ಆರೈಕೆ ಮತ್ತು ಕಾಳಜಿಯಿಂದ ಚಿಕಿತ್ಸೆ ನೀಡುತ್ತಾರೆಯೋ ಅದೇ ರೀತಿ ನ್ಯಾಯಾಧೀಶರು ಪ್ರಕರಣಗಳ ಬಗ್ಗೆ, ಕಕ್ಷಿದಾರರ ಬಗ್ಗೆ ಸಹಾನೂಭೂತಿ, ಕಾಳಜಿ ತೋರಿಸುವ ಮೂಲಕ ಸರಿಯಾದ ನ್ಯಾಯ ನೀಡಿದಾಗ ಮಾತ್ರ ಕಾನೂನು ಮತ್ತು ಸಂವಿಧಾನವನ್ನು ಗೌರವಿಸಿದಂತಾಗುತ್ತದೆ ಎಂದರು.

ದಿನೇ ದಿನೇ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಎಲ್ಲ ವ್ಯಾಜ್ಯಗಳನ್ನು ನ್ಯಾಯಾಧೀಶರು ಬಗೆಹರಿಸುವುದು ಸಾಧ್ಯವಾಗದಿರಬಹುದು. ಹಾಗಾಗಿ ಮಧ್ಯಸ್ಥಿಕೆ ಮುಖಾಂತರ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಂಡಲ್ಲಿ ಸಮಾಜದಲ್ಲಿ ನೆಮ್ಮದಿಯ ವಾತಾವರಣ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಲ್ಲ ನ್ಯಾಯಾಧೀಶರು ಮಧ್ಯಸ್ಥಿಕೆಯ ಬಗ್ಗೆ ತರಬೇತಿ ಮೂಲಕ ಅದರ ಸುಕ್ಷತೆ ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ. ಶಾಂತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧ್ಯಸ್ಥಿಕೆಯು ನ್ಯಾಯಾಧೀಶರ ಕೌಶಲ್ಯಗಳನ್ನು ಹೆಚ್ಚಿಸುವ ಒಂದು ಕ್ರಿಯೆಯಾಗಿದೆ. ನ್ಯಾಯ ನಿರ್ಣಯದಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಿದರು.

ಸಿವಿಲ್ ಮತ್ತು ಕೆಲವು ಕ್ರಿಮಿನಲ್ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸಿಕೊಡಬಹುದಾಗಿದ್ದು, ಪರಸ್ಪರ ಒಪ್ಪಿಗೆಯ ಮೂಲಕ ಮಧ್ಯಸ್ಥಿಕೆ ನಡೆಯುವುದರಿಂದ ಜನರ ನಡುವೆ ಪ್ರೀತಿ, ವಿಶ್ವಾಸ ಮತ್ತು ನೆಮ್ಮದಿ ಮುಂದುವರಿಯುತ್ತದೆ. ಹಾಗಾಗಿ ನ್ಯಾಯಾಧೀಶರು ಮಧ್ಯಸ್ಥಿಕೆಯ ಕೌಶಲ್ಯಗಳನ್ನು ಅರಿತು ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ನಿಯಮಿತವಾಗಿ ಕಳುಹಿಕೊಡುವುದು ಅವರ ಮುಖ್ಯ ಕರ್ತವ್ಯವಾಗುತ್ತದೆ ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಚಂದ್ರಶೇಖರ್ ಸಿ. ಮಾತನಾಡಿ, ನ್ಯಾಯಾಧೀಶರು ರಾಜಿಯಾಗಬಹುದಾದ ಗುಣಗಳಿರುವ ವ್ಯಾಜ್ಯಗಳನ್ನು ಗುರುತಿಸಿ ಅವುಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಕಳುಹಿಸುವುದು ಅತಿ ಅವಶ್ಯಕವಾಗಿರುತ್ತದೆ ಎಂದು ಹೇಳಿದರು.

ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ತರಬೇತುದಾರರಾದ ಗೀತಾದೇವಿ ಎಂ. ಪಾಪಣ್ಣ, ಮಧ್ಯಸ್ಥಿಕೆದಾರರಾದ ಜಯಕೀರ್ತಿ ಎಂ.ಸಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಸ್ವಾಗತಿಸಿದರು. ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ದರಗಡ್ ವಂದಿಸಿದರು. ಬಳ್ಳಾರಿ ಸಿಜೆಎಂ ಇಬ್ರಾಹಿಂ ಮುಜಾವರ ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನ್ಯಾಯಾಂಗ ಅಧಿಕಾರಿಗಳು, ನ್ಯಾಯಾಧೀಶರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ