ಅಲೆಮಾರಿಗಳಿಗೆ ಶೇ.1ರಷ್ಟು ಒಳಮೀಸಲು ಜಾರಿಗೆ ಆಗ್ರಹಿಸಿ ಬೆಂಗಳೂರು ಚಲೋ

KannadaprabhaNewsNetwork |  
Published : Sep 02, 2025, 12:00 AM IST
ಒಳ ಮೀಸಲಾತಿಯಲ್ಲಿ ಶೇ.1ರಷ್ಟು ಅಲೆಮಾರಿ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಹೋರಾಟದ ಪೋಸ್ಟರ್‌ನ್ನು ಮುಖಂಡರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಒಳಮೀಸಲಾತಿಯಲ್ಲಿ ಶೇ.1ರಷ್ಟು ಅಲೆಮಾರಿ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿ ಸೆ. 3 ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಒಳಮೀಸಲಾತಿಯಲ್ಲಿ ಶೇ.1ರಷ್ಟು ಅಲೆಮಾರಿ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿ ಸೆ. 3 ರಂದು ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಮುಖಂಡ ಹಾಗೂ ಅಲೆಮಾರಿ, ಅರೆ ಅಲೆಮಾರಿ ಸಂಘಟನೆಗಳ ಅಧ್ಯಕ್ಷ ವೈ.ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿ ವೇಳೆ ಅಲೆಮಾರಿ ಸಮುದಾಯಕ್ಕೆ ಶೇ.1ರಷ್ಟನ್ನು ನೀಡಬೇಕು ಎಂದು ಅಸ್ಪೃಶ್ಯ ಸಮುದಾಯಗಳ ಕುರಿತು ಅಧ್ಯಯನ ನಡೆಸಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ನೀಡಿದ ಶಿಫಾರಸ್ಸಿನಲ್ಲಿ ತಿಳಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ನ್ಯಾಯಾಂಗ ಸೂಚನೆ ಹಾಗೂ ನಾಗಮೋಹನ್‌ದಾಸ್ ಅವರ ವರದಿ ಧಿಕ್ಕರಿಸಿ, ಮೀಸಲಾತಿ ಜಾರಿಯ ನಿಲುವು ತೆಗೆದುಕೊಂಡಿದೆ. ಇದರಿಂದ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗಿದೆ. ಶೋಷಿತ ಅಸ್ಪೃಶ್ಯ ಅಲೆಮಾರಿಗಳಿಗೆ ನ್ಯಾಯ ನೀಡುವ ಬದಲು ಅಸ್ಪೃಶ್ಯ ಸಮುದಾಯ ಎನಿಸಿದ ಬಲಗೈ ಸಮಾಜಕ್ಕೆ ಶೇ.1ರಷ್ಟು ಮೀಸಲಾತಿ ಹೆಚ್ಚಿಗೆ ನೀಡಲಾಗಿದೆ. ದಲಿತರು, ಶೋಷಿತ ಸಮುದಾಯಗಳ ಬಗ್ಗೆ ಕಾಳಜಿಯ ಮಾತುಗಳನ್ನಾಡುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೆ. 4ರಂದು ಜರುಗುವ ಸಚಿವ ಸಂಪುಟ ಸಭೆಯಲ್ಲಿ ಅಲೆಮಾರಿ ಸಮುದಾಯಕ್ಕಾಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಚಲೋ ಹೋರಾಟವನ್ನು ಸಂಘಟಿಸಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜರುಗುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಅಲೆಮಾರಿ ಸಮುದಾಯಗಳ ಬೆಂಗಳೂರು ಚಲೋ ಹೋರಾಟದ ಹೊರತಾಗಿಯೂ ರಾಜ್ಯದ ಕಾಂಗ್ರೆಸ್ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗಲಿದ್ದೇವೆ ಎಂದು ಸ್ಪಷ್ಟಪಡಿಸಿದರು.ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಪ್ರಮುಖರಾದ ಸುಬ್ಬಣ್ಣ ಸಿಳ್ಳೆಕ್ಯಾತರ, ಎಸ್.ಎಂ. ಮಹೇಶ್‌ಕುಮಾರ್, ಕೆ.ಶಂಕ್ರಪ್ಪ, ಆನಂದಕುಮಾರ್, ಹುಚ್ಚಪ್ಪ, ಜಿ.ಬಾಬು, ರಾಜೇಶ್‌, ಸತ್ಯಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ