- ಜೆಜೆಎಂ ಮೆಡಿಕಲ್ ಕಾಲೇಜಿನ-2019ರ ತಂಡದ ಘಟಿಕೋತ್ಸವದಲ್ಲಿ ಸಂಸದೆ ಡಾ.ಪ್ರಭಾ ಅಭಿಮತ
ಕನ್ನಡಪ್ರಭ ವಾರ್ತೆ ದಾವಣಗೆರೆ
ವೈದ್ಯಕೀಯ ಪದವಿ ಪಡೆಯಲು ಸಾಕಷ್ಟು ಸಾಧನೆ ಮಾಡಿದ್ದೀರಿ. ಈಗ ಗಳಿಸಿರುವುದು ಕೇವಲ ಶೈಕ್ಷಣಿಕ ಮನ್ನಣೆಯಲ್ಲ, ಬದಲಾಗಿ ಮಾನವೀಯತೆಗೆ ಸೇವೆ ಸಲ್ಲಿಸುವ ಪರವಾನಗಿ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.ನಗರದ ಬಾಪೂಜಿ ಆಡಿಟೋರಿಯಂನಲ್ಲಿ ನಡೆದ ಜೆಜೆಎಂ ಮೆಡಿಕಲ್ ಕಾಲೇಜಿನ 2019ರ ತಂಡದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ವೈದ್ಯಕೀಯ ವೃತ್ತಿಯು ಸಾವಿರಾರು ಜೀವಗಳನ್ನು ಉಳಿಸುವ, ಭರವಸೆಯನ್ನು ಪುನಃ ಸ್ಥಾಪಿಸುವ ಮತ್ತು ಪ್ರತಿದಿನ ಬದಲಾವಣೆ ತರುವ ಅಪರೂಪದ ಕಾರ್ಯವಾಗಿದೆ ಎಂದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ನಿಗಮ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ನಿಮಗೆಲ್ಲರಿಗೂ ಅತ್ಯಂತ ಕಠಿಣ ಅನುಭವಗಳು ಆಗಿರುವುದು ಸಹಜ. ಕೋವಿಡ್‌ನ ಅತ್ಯಂತ ಕಷ್ಟದ ಸಮಯದಲ್ಲಿ ವೈದ್ಯರ ಸೇವೆ ನಿಜಕ್ಕೂ ಶ್ಲಾಘನೀಯ. ಇದರಿಂದ ನಮ್ಮೆಲ್ಲರ ಆತ್ಮಸ್ಥೈರ್ಯ ಹೆಚ್ಚಾಗಿರುವುದು ಸತ್ಯ. ನಿಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದಿದ್ದರೆ ಗಂಭೀರವಾಗಿ ಪರಿಗಣಿಸಿ, ಆಲೋಚಿಸಿ. ಅದಕ್ಕೆ ತಕ್ಕ ಹೆಜ್ಜೆ ಇಡುತ್ತಾ, ಛಲ ಬಿಡದೇ ಶ್ರಮಿಸಬೇಕು. ಸೀನಿಯರ್‌ಗಳ ಜೊತೆ ಚರ್ಚಿಸಿ, ಸಲಹೆಗಳನ್ನು ಪಡೆಯಿರಿ. ನಾಗರೀಕ ಸೇವೆಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಷ್ಟಪಡುವವರು ಇದ್ದರೆ ಸಂಪರ್ಕಿಸಬಹುದು. ನನ್ನಿಂದಾಗುವ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಂಟರ್ನಿಗಳಿಗೆ ಪ್ರಮಾಣ ಪತ್ರವನ್ನು, ರ‍್ಯಾಂಕ್ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
(ಬಾಕ್ಸ್) ಕಾಲೇಜಿನ ಡೀನ್ ಡಾ.ಮಂಜುನಾಥ ಆಲೂರು ಮಾತನಾಡಿ, ಜಗತ್ತಿನ ಯಾವುದೇ ಭಾಗಕ್ಕೆ ಹೋಗಿ ನೋಡಿ ಅಲ್ಲಿ ಒಬ್ಬ ಜೆಜೆಎಂ ಕಾಲೇಜಿನ ಹಳೆ ವಿದ್ಯಾರ್ಥಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಕಾಲೇಜು ನೀಡುತ್ತಿರುವ ಉನ್ನತ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಎಂದರು. ಜೀವನದಲ್ಲಿ ಓದಿನ ಜೊತೆ ಒಂದಿಷ್ಟು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮೊದಲನೆಯದಾಗಿ ನಿಮ್ಮ ತಂದೆ- ತಾಯಿಯನ್ನು ಗೌರವಿಸಿ, ಪ್ರೀತಿಸುವುದು. ನಂತರ ನಿಮ್ಮ ಗುರುಗಳಿಗೆ ಓದಿದ ಸಂಸ್ಥೆಗೆ ನಿಮ್ಮ ಸಹಪಾಠಿಗಳಿಗೆ ಸ್ನೇಹಿತರಿಗೆ ಹಾಗೂ ಬಹು ಮುಖ್ಯವಾಗಿ ನಿಮ್ಮ ಸಂಗಾತಿಗೆ ಗೌರವಿಸಬೇಕು. ಆಗ ನೀವು ಉತ್ತಮ ನಾಗರೀಕ ಆಗುತ್ತೀರಿ ಎಂದರು.
-16ಕೆಡಿವಿಜಿ33: