ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಏ. 19ರಿಂದ 27ರವರೆಗೆ ವೈದ್ಯಕೀಯ ಪ್ರಯೋಗಾಲಯ ವೃತ್ತಿಪರರ ಸಪ್ತಾಹ 2026ಅನ್ನು ಆಚರಿಸಲಾಯಿತು. ಈ ಮೂಲಕ ಪ್ರಯೋಗಾಲಯ ವೃತ್ತಿಪರರ ಅಮೂಲ್ಯ ಕೊಡುಗೆಗಳನ್ನು ಗುರುತಿಸಲಾಯಿತು. ಈ ಸಂದರ್ಭ ಮಾಹೆ ಮಣಿಪಾಲ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್‍ಯಾಚರಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, ಪ್ರಯೋಗಾಲಯ ವೃತ್ತಿಪರರ ನಿರಂತರ ಸೇವೆಯನ್ನು ಮತ್ತು ಆರೋಗ್ಯ ಸೇವೆಯಲ್ಲಿ ಅವರ ನಿರ್ಣಾಯಕ ಪಾತ್ರವನ್ನು ಶ್ಲಾಘಿಸುತ್ತಾ, “ಪ್ರಯೋಗಾಲಯ ವೃತ್ತಿಪರರು ಆರೋಗ್ಯ ವ್ಯವಸ್ಥೆಯ ಆಧಾರ ಸ್ತಂಭಗಳು. ಪ್ರತಿಯೊಂದು ನಿಖರವಾದ ರೋಗ ನಿರ್ಣಯ, ಸಕಾಲಿಕ ಚಿಕಿತ್ಸೆ ಮತ್ತು ಪ್ರತಿ ಯಶಸ್ವಿ ರೋಗಿಯ ಫಲಿತಾಂಶವು ಅವರ ಸಮರ್ಪಣೆ ಮತ್ತು ನಿಖರತೆಯಿಂದ ಬೆಂಬಲಿತವಾಗಿದೆ. ಅವರ ಕೆಲಸವು ಪರದೆಯ ಹಿಂದೆ ನಡೆಯಬಹುದು. ಆದರೆ ಅದರ ಪ್ರಭಾವವು ನಾವು ಸ್ಪರ್ಶಿಸುವ ಪ್ರತಿಯೊಂದು ಜೀವದಲ್ಲಿಯೂ ಕಂಡುಬರುತ್ತದೆ ಎಂದರು.
ಜೀವರಸಾಯನಶಾಸ್ತ್ರದ ಪ್ರಯೋಗಾಲಯ ಉಸ್ತುವಾರಿ ಡಾ. ವಿಜೇತ ಶೆಣೈ ಬೆಳ್ಳೆ ಸ್ವಾಗತಿಸಿದರು. ರಕ್ತಶಾಸ್ತ್ರ ಮತ್ತು ಕ್ಲಿನಿಕಲ್ ಪ್ರಯೋಗಾಲಯದ ಪ್ರಯೋಗಾಲಯ ಉಸ್ತುವಾರಿ ಡಾ. ಸುಷ್ಮಾ ಬೇಲೂರ್ಕರ್ ಧನ್ಯವಾದ ಅರ್ಪಿಸಿದರು.ಮೈಕ್ರೋಬಯಾಲಜಿಯ ಮಾಲತಿ, ರಕ್ತನಿಧಿಯ ಪೂರ್ಣಿಮಾ, ರಕ್ತಶಾಸ್ತ್ರದ ಸುಜಾತ, ರೋಗಶಾಸ್ತ್ರದ ಸತೀಶ್ ಪೂಜಾರಿ, ವೈದ್ಯಕೀಯ ಜೆನೆಟಿಕ್ಸ್‌ನ ಸೌಮ್ಯ ಆಚಾರ್ಯ, ಸ್ಟಾಟ್ ಲ್ಯಾಬ್‌ನ ಅಕ್ಷತಾ ಮತ್ತು ಕ್ಲಿನಿಕಲ್ ಬಯೋಕೆಮಿಸ್ಟ್ರಿಯ ಗಣೇಶ್ ನಾಯಕ್ ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿದರು.ಜೀವರಸಾಯನಶಾಸ್ತ್ರ ವಿಭಾಗ ಮಖ್ಯಸ್ಥ ಡಾ. ರವೀಂದ್ರ ಮರಡಿ, ಸೂಕ್ಷ್ಮ ಜೀವಶಾಸ್ತ್ರ ವಿಭಾಗ ಮಖ್ಯಸ್ಥ ಡಾ. ಶಶಿಧರ್ ವಿ. ಮತ್ತು ರೋಗಶಾಸ್ತ್ರ ವಿಭಾಗ ಮಖ್ಯಸ್ಧೆ ಡಾ. ವಿದ್ಯಾ ಮೋನಪ್ಪ ಹಾಗೂ ಆಸ್ಪತ್ರೆಯ ಎಲ್ಲ ಪ್ರಯೋಗಾಲಯ ಮೇಲ್ವಿಚಾರಕರು ಭಾಗವಹಿಸಿದ್ದರು.