ತಾಯಿಯ ಅಂತಃಕರಣೆ ಹಾಗೂ ಬುದ್ಧನ ಕಾರುಣ್ಯ ಎರಡನ್ನು ಯಾವ ವ್ಯಕ್ತಿ ಪಾಲಿಸುತ್ತಾನೋ ಅವರು ಸಮಾಜದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಪತ್ರಕರ್ತ ಹಾಗೂ ರಂಗಕಲಾವಿದರಾದ ಉಗಮ ಶ್ರೀನಿವಾಸ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಯಿಯ ಅಂತಃಕರಣೆ ಹಾಗೂ ಬುದ್ಧನ ಕಾರುಣ್ಯ ಎರಡನ್ನು ಯಾವ ವ್ಯಕ್ತಿ ಪಾಲಿಸುತ್ತಾನೋ ಅವರು ಸಮಾಜದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ಪತ್ರಕರ್ತ ಹಾಗೂ ರಂಗಕಲಾವಿದರಾದ ಉಗಮ ಶ್ರೀನಿವಾಸ್ ತಿಳಿಸಿದರು.ಪಟ್ಟಣದ ಚಾಲುಕ್ಯ ಆಸ್ಪತ್ರೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಹಾಗೂ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವ್ಯಕ್ತಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೆಲಸಗಳನ್ನು ಮಾಡಿದರೆ ಅವನು ಸಮಾಜದಲ್ಲಿ ಗೆಲ್ಲುತ್ತಾನೆ. ಸಮಾಜದಲ್ಲಿ ಸದ್ದು ಮಾಡಿಕೊಂಡು ಕೆಲಸ ಮಾಡುವುದಕ್ಕಿಂತ ಪ್ರಚಾರ ಮಾಡದೆ ಕೆಲಸ ಮಾಡಿದರೆ ಹೆಚ್ಚು ಕಾಲ ಸಮಾಜದಲ್ಲಿ ಉಳಿಯಬಹುದು. ವೈದ್ಯ ವೃತ್ತಿ ಕೇವಲ ಒಂದು ಉದ್ಯೋಗವಲ್ಲ, ಅದೊಂದು ಪವಿತ್ರವಾದ ಸೇವೆ. ಈ ನಿಟ್ಟಿನಲ್ಲಿ ಚಾಲುಕ್ಯ ಆಸ್ಪತ್ರೆಯ ಡಾ.ನಾಗಭೂಷಣ್ ಉತ್ತಮ ವೈದ್ಯಕೀಯ ಸೇವೆ ಮಾಡುತ್ತಿದ್ದಾರೆ. ಮಾಧ್ಯಮದವರು ಸುಮ್ಮನೆ ಸುದ್ದಿ ತುಂಬುವ ಕೆಲಸ ಮಾಡುತ್ತಾರೆ. ಅದರ ಬದಲು ಸಮಾಜದ ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಿದಾಗ ಅವರು ನಿಜವಾದ ಪತ್ರಕರ್ತ ಎನ್ನಿಸಿಕೊಳ್ಳುತ್ತಾರೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್ ಮಾತನಾಡಿ, ವೈದ್ಯರು ಮನುಷ್ಯರ ಆರೋಗ್ಯಕ್ಕಾಗಿ ಕೆಲಸ ಮಾಡಿದರೆ, ಮಾಧ್ಯಮದವರು ಸಮಾಜದ ಅನಿಷ್ಟ ಚಟುವಟಿಕೆಗಳನ್ನು ತಿದ್ದುವ ಕೆಲಸ ಮಾಡುತ್ತಾರೆ. ಔಷಧಿಗಳು ರೋಗವನ್ನು ಗುಣಪಡಿಸಿದರೆ, ವೈದ್ಯರ ಪ್ರೀತಿಯ ಮಾತು ಮತ್ತು ಕಾಳಜಿ ರೋಗಿಗೆ ಬೇಗ ಗುಣವಾಗುವ ಆತ್ಮವಿಶ್ವಾಸ ಉಂಟಾಗುತ್ತದೆ ಎಂದು ತಿಳಿಸಿದರು.
ಚಾಲುಕ್ಯ ಅಸ್ಪತ್ರೆಯ ಸಿಇಒ ಡಾ.ನಾಗಭೂಷಣ್ ಮಾತನಾಡಿ, ಭಾರತದ ಖ್ಯಾತ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ. ಬಿ.ಸಿ. ರಾಯ್ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ನೆನಪಿನಲ್ಲಿ ಪ್ರತಿ ವರ್ಷ ಜುಲೈ 1 ರಂದು ವೈದ್ಯರ ದಿನ ಹಾಗೂ ಪತ್ರಕರ್ತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಡಾ.ಜಗದೀಶ್ ಮಾತನಾಡಿ, ಸೋಷಿಯಲ್ ಮೀಡಿಯಾಕ್ಕೆ ಎಥಿಕ್ಸ್ ಇರುವುದಿಲ್ಲ. ಅದ್ದರಿಂದ ನೋಂದಾಯಿತ ಪತ್ರಕರ್ತ ಸಂಘದವರು ಸೋಷಿಯಲ್ ಮೀಡಿಯಾಕ್ಕೆ ಕಟ್ಟುಪಾಡುಗಳನ್ನು ಮಾಡುವುದು ಸಮಾಜದ ಒಳಿತಿಗಾಗಿ ಉತ್ತಮ ಎಂದರು.ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ರಶ್ಮಿ , ಡಾ.ಮಹಾಲಕ್ಷ್ಮಿ, ಡಾ.ರಕ್ಷಿತ್, ಡಾ.ಶ್ರೀರಕ್ಷ,ಡಾ.ಗಂಗಾ, ಶ್ವೇತ, ಪ್ರಸನ್ನ ದೊಡ್ಡಗುಣಿ, ರಾಮಾಂಜನಯ್ಯ, ಸಿಬ್ಬಂದಿಗಳು, ಸಾರ್ವಜನಿಕರು ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.