ವಾಸವಿ ಜಯಂತಿ ಹಿನ್ನೆಲೆ ಮುಚ್ಚಿದ ಅಂಗಡಿಗಳು
ಹೊಳೇನರಸೀಪುರ: ಪಟ್ಟಣದಲ್ಲಿ ಶನಿವಾರ ಬಹುತೇಕ ಪ್ರಮುಖ ಔಷಧಿ ಅಂಗಡಿಗಳು ಬಂದ್ ಆಗಿದ್ದು ರೋಗಿಗಳು ಔಷಧಿ ಸಿಗದೆ ಪರದಾಡಿದರು.ಆರ್ಯವೈಶ್ಯ ಜನಾಂಗದವರು ಶನಿವಾರ ವಾಸವಿ ಜಯಂತಿ ಆಚರಿಸಿದ ಕಾರಣದಿಂದ ಪಟ್ಟಣದಲ್ಲಿ ಆರ್ಯವೈಶ್ಯ ಜನಾಂಗದವರ ಎಲ್ಲಾ ಬಗೆಯ ಅಂಗಡಿಗಳು ಬಂದ್ ಆಗಿತ್ತು. ಬೇರೆ ಯಾವುದೇ ಅಂಗಡಿ ತೆಗೆಯದಿದ್ದರೂ ತೊಂದರೆ ಇಲ್ಲ. ಆದರೆ ಪಟ್ಟಣದಲ್ಲಿ ಇರುವ ಔಷಧಿ ಅಂಗಡಿಗಳ ಪೈಕಿ 10 ಪ್ರಮುಖ ಔಷಧಿ ಅಂಗಡಿಗಳು ಆರ್ಯವೈಶ್ಯ ಜನಾಂದವರದ್ದೇ ಆಗಿದ್ದು, ಇವು ಬಂದ್ ಆಗಿದ್ದರಿಂದ ರೋಗಿಗಳು ಪರದಾಡಿದರು.
ಕೆಲವು ರೋಗಿಗಳು ನಿಗದಿತ ಅಂಗಡಿಗಳಲ್ಲಿ ಖಾತೆ ತೆರೆದು ತಿಂಗಳಿಗೊಮ್ಮೆ ಹಣ ನೀಡಿ ಔಷಧಿ ಖರೀದಿಸುತ್ತಾರೆ. ಕೆಲವು ಹಿರಿಯರು, ‘ನಾವು ಪ್ರತೀದಿನ ಯಾವ ಔಷಧಿ ತೆಗೆದು ಕೊಳ್ಳುತ್ತೇವೆ ಎಂದು ಗೊತ್ತಿರುವುದಿಲ್ಲ. ನಾನು ನನ್ನ ಮಾಮೂಲಿ ಅಂಗಡಿಗೆ ವೈದ್ಯರು ನೀಡಿದ್ದ ಚೀಟಿ ಕೊಟ್ಟು ನಿತ್ಯ ಅದನ್ನೇ ತೆಗೆದುಕೊಳ್ಳುತ್ತಿದ್ದೆ. ಅದು ಯಾವುದೆಂದು ಹೆಸರು ಗೊತ್ತಿಲ್ಲ. ನಾನು ಇವತ್ತು ಔಷಧಿ ತೆಗೆದುಕೊಳ್ಳದಿದ್ದರೆ ನನ್ನ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿ ಆಗಿ ತೊಂದರೆ ಆಗುತ್ತದೆ. ಇವರು ನೋಡಿದ್ರೆ ಬಾಗಿಲು ಹಾಕಿದ್ದಾರೆ’ ಎಂದು ಔಷಧಿ ತೆಗೆದುಕೊಳ್ಳಲು ಬಂದಿದ್ದ ರಾಮಪ್ಪ ಕೊರಗಿದರು.ಶನಿವಾರ ಔಷಧ ಮಳಿಗೆಗಳ ಬಂದ್ ಮಾಡಿದ್ದು ಜನರಿಗೆ ಬೇಸರ ತರಿಸಿದೆ. ಆರ್ಯವೈಶ್ಯ ಜನಾಂಗದ ಕೆಲವು ಔಷಧಿ ಅಂಗಡಿಗಳು ಕಳೆದ ಐದಾರು ದಶಕಗಳಿಂದ ಒಳ್ಳೆಯ ನಂಬಿಕೆ ಉಳಿಸಿಕೊಂಡಿದ್ದು ಅವರ ನಿತ್ಯದ ಅಂಗಡಿಗಳಲ್ಲೇ ಔಷಧಿ ತೆಗೆದುಕೊಳ್ಳುವವರಿಗೆ ತೊಂದರೆ ಆಯಿತು. ಆರ್ಯವೈಶ್ಯ ಜನಾಂಗದವರ ಅಂಗಡಿಗಳನ್ನು ಹೊರತು ಪಡಿಸಿ ಇತರ ಔಷಧಿ ಅಂಗಡಿಗಳು ತೆರೆದಿದ್ದವು. ಮುಂದಿನ ದಿನಗಳಲ್ಲಿ ಎಲ್ಲಾ ಔಷಧಿ ಅಂಗಡಿಗಳಿಗೆ ವಾಸವಿ ಜಯಂತಿ ದಿನದಂದೂ ತೆರೆಯಬೇಕು ಎಂದು ಜನರು ವಿನಂತಿಸಿದ್ದಾರೆ.