ಹನುಮಸಾಗರ: ವಿದ್ಯಾರ್ಥಿ ಜೀವನದಲ್ಲಿ ಧ್ಯಾನ ಅತ್ಯಂತ ಅವಶ್ಯಕವಾಗಿದ್ದು, ಏಕಾಗ್ರತೆ ಹಾಗೂ ಶಿಸ್ತು ಬೆಳೆಸಲು ಧ್ಯಾನ ಸಹಕಾರಿಯಾಗಿದೆ ಎಂದು ಮುಖ್ಯ ಶಿಕ್ಷಕ ಶರಣಪ್ಪ ಗುಳೇದ ಹೇಳಿದರು.
ಕೆಪಿಎಸ್ ಉಪಾಧ್ಯಕ್ಷ ಬಸವರಾಜ ದೇವಣ್ಣನವರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾನಸಿಕ ಶಾಂತಿ, ಆತ್ಮವಿಶ್ವಾಸ ಮತ್ತು ಮೌಲ್ಯಾಧಾರಿತ ಜೀವನಕ್ಕೆ ಧ್ಯಾನ ನೆರವಾಗುತ್ತದೆ. ಶಾಲಾ ಹಂತದಲ್ಲೇ ಧ್ಯಾನ ಸಂಸ್ಕಾರ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.
ಧ್ಯಾನ ಪ್ರಚಾರಕ ಏಕನಾಥ ಮೆದಿಕೇರಿ ಅವರು ವಿದ್ಯಾರ್ಥಿಗಳಿಗೆ ಆನಾಪಾನಸತಿ ಧ್ಯಾನದ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಿ ಮಾತನಾಡಿ, ಸುಖಾಸನದಲ್ಲಿ ಕುಳಿತು ಸಹಜವಾಗಿ ನಡೆಯುವ ಉಸಿರಾಟವನ್ನು ಗಮನಿಸುವ ಮೂಲಕ ಯಾವುದೇ ಮಂತ್ರ, ಜಪ, ನಾಮಸ್ಮರಣೆ ಅಥವಾ ದೈವಿಕ ಕಲ್ಪನೆಗಳಿಲ್ಲದೆ ಧ್ಯಾನ ಸ್ಥಿತಿಗೆ ತಲುಪಬಹುದು ಎಂದು ತಿಳಿಸಿದರು.ಧ್ಯಾನದಿಂದ ದೇಹದಲ್ಲಿ ವಿಶ್ವಮಯ ಪ್ರಾಣಶಕ್ತಿ ಪ್ರವೇಶಿಸಿ ನಾಡಿಮಂಡಲ ಶುದ್ಧಿಯಾಗಿ ಸಂಪೂರ್ಣ ಆರೋಗ್ಯ ದೊರೆಯುವ ಜತೆಗೆ ಏಕಾಗ್ರತೆ, ನೆನಪಿನ ಶಕ್ತಿ, ಆತ್ಮವಿಶ್ವಾಸ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಜ್ಞಾನ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು. ನಿಯಮಿತ ಧ್ಯಾನದಿಂದ ಸುಪ್ತ ಚೇತನಗಳು ಜಾಗ್ರತವಾಗಿ ಬುದ್ಧಿ ಸೂಕ್ಷ್ಮತೆ ಹೆಚ್ಚಾಗುತ್ತದೆ. ಯಾವ ವಯಸ್ಸಿನವರಾದರೂ, ಯಾವ ಸಮಯದಲ್ಲಾದರೂ ಮತ್ತು ಯಾವುದೇ ಸ್ಥಳದಲ್ಲಿಯೂ ಧ್ಯಾನ ಮಾಡಬಹುದಾಗಿದೆ. ಧ್ಯಾನದಿಂದ ಮಾನಸಿಕ ಒತ್ತಡ ನಿವಾರಣೆ, ಜೀವನದ ಗುರಿಯ ಸ್ಪಷ್ಟತೆ ಹಾಗೂ ಮಾನವೀಯ ಸಂಬಂಧಗಳ ಸುಧಾರಣೆ ಸಾಧ್ಯವಾಗುತ್ತದೆ ಎಂದರು.
ಶಿಕ್ಷಕರಾದ ಅಮರೇಶ ತಮ್ಮಣ್ಣವರ, ಭಾರತಿ ಕುರುಮನಾಳ, ಶಂಕ್ರಪ್ಪ ತಳವಾರ, ಈರಣ್ಣ ಪರಸಾಪುರ, ಸವಿತಾ ಕಂದಗಲ, ವಿಜಯಕುಮಾರ ಚೆಲ್ಲಾಳ, ಬೀರಪ್ಪ ಕಡ್ಲಿಮಟ್ಟಿ, ಷಣ್ಮುಖಪ್ಪ ಕರಡಿ, ಎಲ್ಲಮ್ಮ, ಶ್ರೀಕಾಂತ್ ಗೌಡ, ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಎಚ್.ಎಚ್. ಇಲಕಲ್, ರಾಮಚಂದ್ರ ಬಡಿಗೇರ, ಕಿಶನ್‌ರಾವ್ ಕುಲಕರ್ಣಿ, ಶರಣಪ್ಪ ಬೋದುರ, ಚಂದಪ್ಪ ಕುಂಬಾರ, ವಿದ್ಯಾರ್ಥಿಗಳು ಇತರರು ಇದ್ದರು.