ಲಕ್ಷ್ಮೇಶ್ವರ: ಧ್ಯಾನ ಇಂದು ಉತ್ತಮ ಆರೋಗ್ಯ, ಮನಸ್ಸಿನ ನಿಯಂತ್ರಣಕ್ಕಾಗಿ ಮಾಡುತ್ತಿದ್ದು, ಧ್ಯಾನವು ವ್ಯಕ್ತಿಯನ್ನು ಸ್ವಯಂ ಶಿಸ್ತಿನ ಕಡೆಗೆ ಕರೆದುಕೊಂಡು ಹೋಗುತ್ತದೆ. ದಿನದ ಒಂದಿಷ್ಟು ಸಮಯ ನಾವು ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುವುದು ಮತ್ತು ಒತ್ತಡದಿಂದ ಮುಕ್ತಿ ಸಿಗುವುದು ಎಂದು ಸಾಹಿತಿ ಹಾಗೂ ಶಿಕ್ಷಕಿ ಡಾ. ಜಯಶ್ರೀ ಕೋಲಕಾರ ಹೇಳಿದರು.
ಧ್ಯಾನದಿಂದ ಮಾನಸಿಕ ಸ್ಥಿರತೆ ಮತ್ತು ಸಮತೋಲನ ಸಹ ಸಾಧಿಸಬಹುದಾಗಿದೆ. ಧ್ಯಾನದ ಮಹತ್ವ ಮತ್ತು ಪ್ರಯೋಜನ ಅರಿತುಕೊಳ್ಳುವ ಮೊದಲು ನಾವು ಧ್ಯಾನ ಎಂದರೇನು ಎಂಬುದನ್ನು ತಿಳಿದುಕೊಂಡಿರಬೇಕು ಎಂದು ಹೇಳಿದರು.
ಯೋಗ ಶಿಕ್ಷಕಿ ಕಾವ್ಯಾ ವಡಕಣ್ಣವರ ಮಾತನಾಡಿ, ಮಾನಸಿಕ ಮತ್ತು ದೈಹಿಕ ಸ್ಥಿರತೆ ಕೂಡ ನಾವು ಧ್ಯಾನವೆಂದು ಕರೆಯಬಹುದಾಗಿದ್ದು, ಧ್ಯಾನದಿಂದ ಮನುಷ್ಯನಲ್ಲಿನ ಏಕಾಗ್ರತೆ ಜಾಗೃತವಾಗುತ್ತದೆ, ಧ್ಯಾನ ಎಂದರೆ ಮುಕ್ತಿ ನಮ್ಮ ದೇಹದ ಮೇಲಿನ ನಿಯಂತ್ರಣಕ್ಕೆ ಧ್ಯಾನ ಅತ್ಯಂತ ಉಪಯೋಗ, ನಮ್ಮ ಉಸಿರೇ ನಮ್ಮ ಗುರು ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಧ್ಯಾನ ಮಗ್ನರಾದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ, ಧ್ಯಾನದಿಂದ ಮನಸನ್ನು ನಿಯಂತ್ರಿಸಲು ಸಾಧ್ಯ,ಯೋಗ ಮತ್ತು ಧ್ಯಾನ ಸರಿಯಾಗಿ ಅಳವಡಿಸಿಕೊಂಡಲ್ಲಿ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ಪ್ರಕಾಶ ವಡಕಣ್ಣವರ ವಹಿಸಿದ್ದರು. ಡಾ. ಬೆಳವಗಿ, ಉಮೇಶ ಮ್ಯಾಗೇರಿ, ಮೈತ್ರಾದೇವಿ ಹಿರೇಮಠ, ವೀಣಾ ಹತ್ತಿಕಾಳ, ಶಿವಲೀಲಾ ಚೆಕ್ಕಿ,ನಂದಿನಿ ಮಾಳವಾಡ, ಅಕ್ಕಮ್ಮ ಕಳಸದ, ಮಧು ಗಾಂಧಿ, ಮಲ್ಲಮ್ಮ,ಗೀತಾ ಹುಲಜಾರ ಮುಂತಾದವರಿದ್ದರು.