ಧ್ಯಾನ, ಗ್ರಂಥಗಳ ಅಧ್ಯಯನ, ಶ್ರವಣದಿಂದ ಆತ್ಮ ಸಾಧನೆಯಾಗುತ್ತದೆ: ಶ್ರೀಸತ್ಯಾತ್ಮತೀರ್ಥ ಸ್ವಾಮೀಜಿ

KannadaprabhaNewsNetwork |  
Published : May 22, 2026, 01:15 AM IST
38 | Kannada Prabha

ಸಾರಾಂಶ

ಒಬ್ಬ ಸಾಮಾನ್ಯ ಮಹಿಳೆಯಾಗಿದ್ದ ನಾರದರ ತಾಯಿ ನಿರಂತರವಾಗಿ ಋಷಿ, ಮುನಿಗಳ ಸೇವೆ ಮಾಡಿದಳು. ಅದೇ ಪರಿಸರದಲ್ಲಿ ಬೆಳೆದ ಬಾಲಕ ವಿಷ್ಣುವಿನ ಮಹಾಭಕ್ತನಾದ. ತ್ರಿಲೋಕ ಸಂಚಾರಿಯಾದ. ಇದು ನಮಗೆ ಮಾದರಿ ಆಗಬೇಕು. ನಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ತಪ್ಪಿಸಿ, ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯದಂತೆ ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ದೇವರ ಸ್ಮರಣೆ, ಭಜನೆ, ಧ್ಯಾನ ಮತ್ತು ಗ್ರಂಥಗಳ ಅಧ್ಯಯನ ಮತ್ತು ಶ್ರವಣದಿಂದ ಆತ್ಮ ಸಾಧನೆಯಾಗುತ್ತದೆ. ಏಕಾಗ್ರ ಮನದಿಂದ ಇವೆಲ್ಲವನ್ನೂ ಮಾಡಬೇಕು. ಯಾವುದೇ ಕಾರ್ಯಕ್ರಮ ನಡೆದರೂ ಅಲ್ಲಿ ಸ್ವಲ್ಪವಾದರೂ ಜ್ಞಾನ ಕಾರ್ಯಗಳನ್ನು ಮಾಡಬೇಕು. ಆಗ ಅನಂತ ಪುಣ್ಯ ಲಭ್ಯವಾಗುತ್ತದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ತಿಳಿಸಿದರು.

ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ನಗರದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿರುವ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥಯಾತ್ರೆ, ತೀರ್ಥಸ್ನಾನ, ಹಿರಿಯರ ಸೇವೆ, ಗುರುಗಳ ದರ್ಶನದಿಂದ ಪಾಪ ನಿವಾರಣೆ ಆಗುತ್ತದೆ. ಶಾಸ್ತ್ರಗಳು ಇದನ್ನೇ ಪ್ರತಿಪಾದಿಸಿವೆ ಎಂದರು.

ಒಬ್ಬ ಸಾಮಾನ್ಯ ಮಹಿಳೆಯಾಗಿದ್ದ ನಾರದರ ತಾಯಿ ನಿರಂತರವಾಗಿ ಋಷಿ, ಮುನಿಗಳ ಸೇವೆ ಮಾಡಿದಳು. ಅದೇ ಪರಿಸರದಲ್ಲಿ ಬೆಳೆದ ಬಾಲಕ ವಿಷ್ಣುವಿನ ಮಹಾಭಕ್ತನಾದ. ತ್ರಿಲೋಕ ಸಂಚಾರಿಯಾದ. ಇದು ನಮಗೆ ಮಾದರಿ ಆಗಬೇಕು. ನಮ್ಮ ಮಕ್ಕಳನ್ನು ಮೊಬೈಲ್ ಗೀಳಿನಿಂದ ತಪ್ಪಿಸಿ, ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯದಂತೆ ಬೆಳೆಸಬೇಕು ಎಂದರು.

ದೇವರ ಕತೆಗಳನ್ನು ಸುಮ್ಮನೇ ಕುಳಿತು ಕೇಳಬಾರದು. ಮನನ ಮತ್ತು ಧ್ಯಾನ ಮಾಡಬೇಕು. ದೇವರ ಉಪಕಾರವನ್ನು ಸದಾ ಸ್ಮರಿಸಬೇಕು. ನಿತ್ಯವೂ ದೇವರ ಕೊಡುಗೆಗಳನ್ನು ಸ್ಮರಿಸಿದರೆ ಆಪತ್ ಕಾಲದಲ್ಲಿ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಲಿಯುಗದಲ್ಲಿ ಸ್ವಲ್ಪ ಧರ್ಮ ಮಾಡಿದರೂ ಪುಣ್ಯ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕ ಮಾಸವು ವರದಾನವಾಗಿ ಬಂದಿದೆ ಎಂದರು.

ಶುದ್ಧ ಮನದಿಂದ ದೇವರ ಕುರಿತಾದ ಸಾಹಿತ್ಯ ಓದಬೇಕು. ಮಹಾಭಾರತ ಮತ್ತು ಭಾಗವತದಂಥ ಗ್ರಂಥಗಳು ಎಲ್ಲ ಸಾಹಿತ್ಯಕ್ಕೂ ಮೇರು ಸ್ಥಾನದಲ್ಲಿವೆ. ಇಂಥ ಕಥಾ ಸಮುದ್ರ ಲೋಕದಲ್ಲಿ ಎಲ್ಲೂ ಇಲ್ಲ. ಭಗವಾನ್ ವೇದವ್ಯಾಸರು ಇದನ್ನು ರಚಿಸಿ ಕೊಟ್ಟಿದ್ದು, ಆಚಾರ್ಯ ಮಧ್ವರು ಸಮಗ್ರವಾಗಿ ತಾತ್ಪರ್ಯ ನಿರ್ಣಯಗಳನ್ನು ರಚನೆ ಮಾಡಿಕೊಟ್ಟಿದ್ದಾರೆ. ನಾವು ಎತ್ತರಕ್ಕೆ ಏರಬೇಕು ಎಂದರೆ ಹರಿಕಥಾ ಶ್ರವಣ, ಜ್ಞಾನಿಗಳ ಸಂಗದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ರಂಜಿಸಿದ ಗಾಯನ:

ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ ಯುವ ಪ್ರತಿಭೆಗಳಾದ ಕೌಸಲ್ಯಾ ರಘುರಾಂ ಮತ್ತು ಎ.ಆರ್. ಅಪ್ರಮೇಯ ಅವರು

ದಾಸ ಲಹರಿ- ಜುಗಲ್ ಬಂದಿ ಕಾರ್ಯಕ್ರಮ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ವಿದ್ವಾಂಸರಾದ ಗಣೇಶ ಭಟ್ (ಕೀಬೋರ್ಡ್), ಭೀಮಾ ಶಂಕರ (ತಬಲಾ) ಮತ್ತು ಗುರುದತ್ತ (ರಿದಂ ಪ್ಯಾಡ್) ಸಹಕಾರ ನೀಡಿದರು.

ಪಂಡಿತ ಭೀಮಸೇನಾಚಾರ್ಯ ಆತನೂರು ಪ್ರವಚನ ನೀಡಿದರು. ಬೆಳಗ್ಗೆ ಧನ್ವಂತರಿ ಸನ್ನಿಧಿಯಲ್ಲಿ ಶ್ರೀಗಳಿಂದ ಸಂಸ್ಥಾನ ಪೂಜೆ, ಭಕ್ತರಿಗೆ ಮುದ್ರಾ ಧಾರಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರಸಭೆ ಅಧ್ಯಕ್ಷರಾಗಿ ಭವ್ಯಾ ಮಂಜುನಾಥ್ ಅವಿರೋಧ ಆಯ್ಕೆ
ಬಿಜೆಪಿ-ಕಾಂಗ್ರೆಸ್‌ ಹೈಡ್ರಾಮ: ಕೈ ಕೈ ಮಿಲಾಯಿಸಿದ ಕಾರ್ಯಕರ್ತರು