ಕುಷ್ಟಗಿ:
ಕೆಲ ಪ್ರಭಾವಿಗಳ ಅಸಹಕಾರದಿಂದ ತಾಲೂಕಿನ ಶಿರಗುಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳೂಟಗಿ ಗ್ರಾಮದಲ್ಲಿ ನಾಲ್ಕು ತಿಂಗಳಿಂದ ಸಿಸಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು ಸಾರ್ವಜನಿಕರು ಸಂಚರಿಸಲು ಪರದಾಡುತ್ತಿದ್ದಾರೆ.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ 2023-24ನೇ ಸಾಲಿನ ₹ 40 ಲಕ್ಷ ವೆಚ್ಚದಲ್ಲಿ ಬಳೂಟಗಿ ಗ್ರಾಮದ ಮಾರುತಿ ದೇವಸ್ಥಾನದಿಂದ ಎಸ್ಸಿ ಕಾಲನಿ ಮಾರ್ಗವಾಗಿ ತೆಗ್ಗಿಹಾಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ವರೆಗೆ ಕಾಮಗಾರಿ ಆರಂಭವಾಗಿಲ್ಲ. ಇದರ ಹಿಂದೇ ಪ್ರಭಾವಿಗಳ ಕೈವಾಡವಿದ್ದು ಅಧಿಕಾರಿಗಳು ಕಾಮಗಾರಿ ಆರಂಭಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಗಿದ್ದೇನು?:ಸಿಸಿ ಕಾಮಗಾರಿ ಆರಂಭಿಸುವ ಮುಂಚೆ ಸದ್ಯಕ್ಕಿರುವ ರಸ್ತೆಯು ಇಕ್ಕಟಾಗಿದ್ದು ರಸ್ತೆ ಅಗಲೀಕರಣ ಮಾಡಬೇಕೆಂದು ಕೆಲ ಸಂಘಟನೆಗಳು ಹಾಗೂ ಯುವಕರು ತಕರಾರು ಅರ್ಜಿ ಸಲ್ಲಿಸಿದ್ದರು. ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಸ್ತೆ ಒತ್ತುವರಿ ಮಾಡಿಕೊಂಡವರಿಗೆ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ, ಈ ವರೆಗೆ ಯಾವುದೇ ತೆರವು ಮಾಡಿಲ್ಲ. ಅಧಿಕಾರಿಗಳು ಸಹ ಮುಂದಿನ ಕ್ರಮಕ್ರೈಗೊಳ್ಳದೆ ಇರುವುದರಿಂದ ರಸ್ತೆ ಕಾಮಗಾರಿಗೆ ಗ್ರಹಣ ಹಿಡಿದಿದೆ.
ಜನರ ಅನುಕೂಲಕ್ಕಾಗಿ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಕೆಲವರು ಸಹಕಾರ ನೀಡುತ್ತಿಲ್ಲ. ಗ್ರಾಮದಲ್ಲಿ ನಡೆಯುವ ಒಳ್ಳೆಯ ಕೆಲಸಕ್ಕೆ ಜನರ ಸಹಕಾರ ಅಗತ್ಯವಾಗಿದೆ. ಈ ಕುರಿತು ಅಧಿಕಾರಿಗಳಿಗೆ ಸೂಚಿಸುತ್ತೇನೆ.
ದೊಡ್ಡನಗೌಡ ಪಾಟೀಲ ಶಾಸಕ ಗ್ರಾಮದ ಕೆಲವರ ಅಸಹಕಾರದಿಂದ ಸಿಸಿ ರಸ್ತೆ ಕಾಮಗಾರಿ ಆರಂಭವಾಗುತ್ತಿಲ್ಲ. ಈ ಕುರಿತು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇಒ ಪಂಪಾಪತಿ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವಿಗೂ ಸೂಚಿಸಿದ್ದಾರೆ.ರಾಮಣ್ಣ ದಾಸರ ಪಿಡಿಒ ಶಿರಗುಂಪಿ ಗ್ರಾಪಂ ರಸ್ತೆ ಅಗಲಿಕರಣ ಸಮಸ್ಯೆ ಹಾಗೂ ಜೆಜೆಎಂ ಪೈಪ್‌ಲೈನ್ ಕಾಮಗಾರಿ ಸಲುವಾಗಿ ಕಾಮಗಾರಿ ಆರಂಭಿಸಿಲ್ಲ. ಈ ಸಮಸ್ಯೆ ಬಗೆಹರಿಸಿದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಇರ್ಫಾನ ಎಂಜಿನಿಯರ ಕೆಆರ್‌ಐಡಿಎಲ್