ಬಿಜೆಪಿ ಶುದ್ಧೀಕರಣಕ್ಕೆ ಮಾಜಿ ಸಚಿವ ಈಶ್ವರಪ್ಪ ಮನೆಯಲ್ಲಿ ಸಭೆ : ಶಾಸಕ ರಮೇಶ ಜಾರಕಿಹೊಳಿ

KannadaprabhaNewsNetwork |  
Published : Sep 28, 2024, 01:30 AM ISTUpdated : Sep 28, 2024, 12:24 PM IST
ರಮೇಶ ಜಾರಕಿಹೊಳಿ | Kannada Prabha

ಸಾರಾಂಶ

ಬಿಜೆಪಿಯನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಬೆಂಗಳೂರು ಮನೆಯಲ್ಲಿ ಸಭೆ ನಡೆಸಲಾಗಿದೆ ಎಂದು ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.  

 ಬೆಳಗಾವಿ : ಬಿಜೆಪಿಯನ್ನು ಶುದ್ಧೀಕರಣ ಮಾಡುವ ನಿಟ್ಟಿನಲ್ಲಿ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಬೆಂಗಳೂರು ಮನೆಯಲ್ಲಿ ಸಭೆ ನಡೆಸಲಾಗಿದೆ ಎಂದು ಶಾಸಕ, ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ ಬ್ರಿಗೇಡ್‌ ಸ್ಥಾಪಿಸುವ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ. ಬಿಜೆಪಿ ಶುದ್ಧೀಕರಣಕ್ಕಾಗಿ ಸಭೆ ನಡೆಸಲಾಗಿದೆ. ನಾವು ಭಿನ್ನಮತೀಯರಲ್ಲ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪ ಇಂದಿಗೂ ಹಿಂದುಳಿದ ನಾಯಕ. ಅವರ ಬಗ್ಗೆ ಅಪಾರ ಗೌರವವಿದೆ. ನಾವು ಅವರ ಮನೆಗೆ ಹೋಗಿ ರಾಜಕೀಯ ಮಾಡಿರುವುದು ನನಗೆ ತುಂಬಾ ನೋವಾಗಿದೆ. ನಾವು ಏನೇ ಮಾಡಿದರೂ ಪಕ್ಷದ ಚೌಕಟ್ಟಿನಲ್ಲಿರುತ್ತೇವೆ. ಆದರೆ, ರಾಜುಗೌಡ ಯಡಿಯೂರಪ್ಪ ಶಿಷ್ಯನೆಂದು ಗುರುತಿಸಿಕೊಂಡಿದ್ದಾನೆ. ಈಶ್ವರಪ್ಪ ಮನೆಯಲ್ಲಿ ರಾಜುಗೌಡ ಒಳಗಿದ್ದಾನೆ ಎಂದು ಗೊತ್ತಾಗಿದ್ದರೆ ನಾನು ಹೋಗುತ್ತಿರಲಿಲ್ಲ. ಒಳಗೆ ಚರ್ಚೆಯಾಗಿದ್ದನ್ನು ಬಹಿರಂಗಪಡಿಸಿದರೆ ರಾಜುಗೌಡಗೆ ವಿಜಯೇಂದ್ರನೇ ಹೊಡೆಯುತ್ತಾನೆ ಎಂದು ಹೇಳಿದರು.

ಮೀಸಲಾತಿ ಕುರಿತು ಈಶ್ವರಪ್ಪ ಮನೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಚರ್ಚೆ ಮಾಡುತ್ತಿದ್ದರು. ಇದು ಸೌಹಾರ್ದತೆಯ ಸಭೆ. ಆದರೆ, ರಾಜುಗೌಡ ಮಾಧ್ಯಮದ ಮುಂದೆ ಬೇರೆ ಹೇಳಿಕೆ ನೀಡಿದ್ದು ಸರಿಯಲ್ಲ. ಈಶ್ವರಪ್ಪ ಅವರನ್ನು ಬಿಜೆಪಿಗೆ ಕರೆದುಕೊಂಡು ಬರುವಷ್ಟು ಶಕ್ತಿ ನನ್ನಲ್ಲಿಲ್ಲ. ಅವರನ್ನು ರಾಷ್ಟ್ರೀಯ ನಾಯಕರು ಉಚ್ಚಾಟನೆ ಮಾಡಿದ್ದಾರೆ. ವಾಪಸ್‌ ಕರೆತರುವ ಬಗ್ಗೆ ಅವರೇ ನಿರ್ಣಯ ಮಾಡಬೇಕಿದೆ ಎಂದು ನುಡಿದರು.

ರಾಜ್ಯದಲ್ಲಿ ಅನುಮತಿ ಇಲ್ಲದೆ ಸಿಬಿಐ ತನಿಖೆ ನಡೆಸದಂತೆ ಸಂಪುಟ ತೀರ್ಮಾನ ಕೈಗೊಂಡಿರುವುದು ತಪ್ಪು. ಸಿಎಂ ಮತ್ತು ಡಿಸಿಎಂ ಮೇಲೆ ಗುರುತರವಾದ ಆರೋಪಗಳಿವೆ. ಈ ಸಂದರ್ಭದಲ್ಲಿ ಸಂಪುಟ ತೀರ್ಮಾನ ತಪ್ಪು. ಮಾಜಿ ಸಿಎಂ ಯಡಿಯೂರಪ್ಪ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದರು ಎಂಬುದನ್ನು ನೋಡಿ ರಾಜೀನಾಮೆ ಕುರಿತು ತೀರ್ಮಾನ ಕೈಗೊಳ್ಳಬೇಕು. ಅವರ ವಿರುದ್ಧ ಷಡ್ಯಂತ್ರ ನಡೆದಿದೆ ಎಂಬುವುದು ಓಪನ್‌ ಸಿಕ್ರೇಟ್‌ ಇದೆ.

 ಯಾರು ಮಾಡಿದ್ದಾರೆ ಎನ್ನುವುದು ಕೂಡ ಓಪನ್‌ ಸಿಕ್ರೇಟ್. ಅದನ್ನು ನಾವು ಓಪನ್‌ ಆಗಿ ಹೇಳುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ನಾವು ಪಕ್ಷ ಸಂಘಟಿಸಿ 120 ರಿಂದ 140 ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಸಂಘಟನೆಯಲ್ಲಿ ಬಹಳ ಹಿಂದೆ ಹೋಗುತ್ತಿದೆ. ಪಕ್ಷದ ಸಂಘಟನೆ ಬಲವರ್ಧನೆ ಮಾಡುತ್ತೇವೆ ಎಂದ ಅವರು, ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ಹೋರಾಟದ ಕುರಿತು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇವೆ. ಈ ಕುರಿತು ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೂನಿಯರ್‌. ಹಾಗಾಗಿ, ನಾನು ಆತನಿಗೆ ಉತ್ತರ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ