ಕನ್ನಡಪ್ರಭ ವಾರ್ತೆ ಕೆ.ಆರ್. ನಗರಕ್ಷೇತ್ರದ ಪ್ರತಿ ಗ್ರಾಮಗಳಲ್ಲಿಯೂ ಗ್ರಂಥಾಲಯ ಆರಂಭಿಸಿ ಆ ಮೂಲಕ ಮನೆ ಮನಗಳಿಗೆ ಜ್ಞಾನದ ದೀವಿಗೆ ಹಚ್ಚಲು ನಿರ್ಧರಿಸಿದ್ದು, ಈ ಯೋಜನೆಯನ್ನು ಶೀಘ್ರದಲ್ಲಿಯೇ ಅನುಷ್ಠಾನ ಗೊಳಿಸುತ್ತೇನೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ತಾಲೂಕಿನ ಮಾವತ್ತೂರು ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ನಾಗರೀಕರು ನಿಗದಿತ ಸಮಯದಲ್ಲಿ ಗ್ರಂಥಾಲಯಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಂಥಾಲಯಗಳು ಇತ್ತೀಚಿಗೆ ಅರಿವಿನ ಕೇಂದ್ರಗಳಾಗಿದ್ದು, ಅಲ್ಲಿಗೆ ಭೇಟಿ ನೀಡಿದರೆ ವ್ಯಕ್ತಿಯ ಜ್ಞಾನ ಭಂಡಾರ ಹೆಚ್ಚಲಿದ್ದು, ಇದನ್ನು ಅರಿತು ಪೋಷಕರು ತಮ್ಮ ಮಕ್ಕಳು ಅಲ್ಲಿಗೆ ಹೋಗುವಂತೆ ಪ್ರೇರೇಪಣೆ ನೀಡಬೇಕೆಂದು ಮಾರ್ಗದರ್ಶನ ನೀಡಿದ ಶಾಸಕರು ಅನಗತ್ಯವಾಗಿ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ಪೋಲು ಮಾಡುವ ಬದಲು ಮುಂದಿನ ದಿನಗಳಲ್ಲಿ ಗ್ರಂಥಾಲಯಗಳಿಗೆ ಪುಸ್ತಕ ನೀಡಬೇಕೆಂದು ನುಡಿದರು. ಮಾವತ್ತೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಈಗಾಗಲೇ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಆದ್ಯತೆಯ ಮೇರೆಗೆ ಸರ್ಕಾರದಿಂದ ಮತ್ತಷ್ಟು ಹಣ ಕೊಡಿಸುವ ಭರವಸೆ ನೀಡಿದರಲ್ಲದೆ, ಅಭಿವೃದ್ದಿ ಕಾರ್ಯಗಳು ಯಶಸ್ವಿಯಾಗಿ ನಡೆಯಬೇಕಾದರ ಮತದಾರರು ಚುನಾಯಿತ ಸದಸ್ಯರೊಂದಿಗೆ ಕೈ ಜೋಡಿಸಬೇಕೆಂದರು. ಗ್ರಾಪಂ ಅಧ್ಯಕ್ಷೆ ಸುಕನ್ಯ ಕೃಷ್ಣನಾಯಕ, ಉಪಾಧ್ಯಕ್ಷೆ ಭವ್ಯಶಂಕರ್, ಸದಸ್ಯರಾದ ಜ್ಯೋತಿ ಚನ್ನಕೇಶವ, ದೇವಯ್ಯ, ಮಹದೇವ್, ಲೋಹಿತ್, ಜಗದೀಶ್ ರಾಜೇ ಅರಸ್, ಪಿಡಿಒ ಧನಂಜಯ್, ಗ್ರಂಥಾಲಯದ ರಂಗೇಶ, ಮುಖಂಡರಾದ ಮಹದೇವನಾಯಕ, ಮಹೇಶ್ ಅರಸ್, ಮಾಲೇಗೌಡ, ಆದರ್ಶರಾಜೇ ಅರಸ್, ರಾಮಯ್ಯ, ಹೇಮಂತ್ ಕುಮಾರ್, ವೀರರಾಜೇ ಅರಸ್, ವೆಂಕಟೇಶ್, ರಾಮು, ಸೋಮಾಚಾರ್, ಧನರಾಜ್, ಕರಿಯಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ವಕ್ತಾರ ಸೈಯದ್ ಜಾಬೀರ್ ಇದ್ದರು.