ಕನ್ನಡಪ್ರಭ ವಾರ್ತೆ ನಾಪೋಕ್ಲು
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದ ಏರ್ಪಡಿಸಲಾಗಿದ್ದ ಈ ಸಭೆಯಲ್ಲಿ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ದೇವಯ್ಯ ಮತ್ತು ಸದಸ್ಯರು ಪಾಲ್ಗೊಂಡಿದ್ದರು. ಸಭೆಯಲ್ಲಿ ದೇವಾಲಯಗಳ ಹಿನ್ನೆಲೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಸುಮಾರು 5 ಕೋಟಿ ರು. ವೆಚ್ಚದ ಕಾಮಗಾರಿಗಳ ಬಗ್ಗೆ ಡಿಜಿಟಲ್ ಚಿತ್ರೀಕರಣವನ್ನು ಪ್ರದರ್ಶಿಸಲಾಯಿತು.
ದೇವಾಲಯ ಸಮಿತಿಯಿಂದ ಐತಿಹಾಸಿಕ ಹಾಗೂ ಪ್ರಾಚೀನ ಮೂರು ದೇವಾಲಯಗಳಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಪ್ರಗತಿ ಕಾರ್ಯಗಳ ಕುರಿತು ಶಾಸಕ ಮಂತರ್ ಗೌಡ ಸಚಿವರ ಗಮನಕ್ಕೆ ತಂದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ಈ ಬಗ್ಗೆ ಮಾತನಾಡಿ ಮಡಿಕೇರಿ ಸೇರಿದಂತೆ ಕೊಡಗಿನಲ್ಲಿ ಮಳೆ ಬಂದರೆ ಮಾತ್ರ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ತುಂಬಿ ಸರಕಾರಕ್ಕೆ ಸಹಕಾರಿಯಾಗುತ್ತದೆ. ಇಷ್ಟಾಗಿ, ಮಡಿಕೇರಿಯ ನಾಗರಿಕರು ಕಾವೇರಿ ನೀರು ಬಳಸುತ್ತಿಲ್ಲ ಮಡಿಕೇರಿಗೆ ಕೂಟುಹೊಳೆಯ ನೀರನ್ನು ಕುಡಿಯಲು ಬಳಸಲಾಗುತ್ತಿದೆ. ಆದರೆ, ಮಳೆಗಾಲದಲ್ಲಿ ಮಾತ್ರ ಇಲ್ಲಿನ ಜನ ತೀವ್ರ ಬವಣೆ ಪಡುತ್ತಾರೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ದೇವಾಲಯಗಳನ್ನು ಯಥಾ ಸ್ವರೂಪದಲ್ಲಿ ನಿರ್ವಹಿಸುವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಧಾರ್ಮಿಕ ದತ್ತಿ ಇಲಾಖೆಯಿಂದ ಅಧಿಕ ಅನುದಾನ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರಾದ ವೆಂಕಟೇಶ್ ಅವರು “ನಾವು ಇಲಾಖೆಯಿಂದ ಎಲ್ಲ ಯೋಜನೆಗಳನ್ನೊಳಗೊಂಡು “ ಮಾಸ್ಟರ್ ಪ್ಲಾನ್” ಮಾಡಿಸಿ ಹಂತ ಹಂತವಾಗಿ ಈ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಇಲಾಖೆಯ ಉಪ ಕಾರ್ಯದರ್ಶಿ ಎಂ. ಸತ್ಯವತಿ ಅವರೂ ದನಿಗೂಡಿಸಿದರು.
ಆದರೆ, ಈ ಕುರಿತು ಸಚಿವ ರಾಮಲಿಂಗೇಗೌಡ ಅವರು ಪ್ರತಿಕ್ರಿಯಿಸಿ ಈ ಕೆಲಸಗಳಿಗೆಲ್ಲ ನೆರವು ನೀಡುವಷ್ಟು ಇಲಾಖೆಯಲ್ಲಿ ಹಣ ಲಭ್ಯವಿಲ್ಲ. ಶಾಸಕ ಮಂತರ್ ಗೌಡ ಅವರು ಪ್ರಯತ್ನಿಸಿದರೆ ಮುಖ್ಯಮಂತ್ರಿಯವರ ನಿಧಿಯಲ್ಲಿ ಸಾಕಷ್ಟು ಹಣವಿದೆ. ಅವರು ಕೊಡಬಹುದು ಎಂದು ಸಲಹೆಯಿತ್ತರು. ಅಲ್ಲದೆ ಶಾಸಕ ಶಿವರಾಜ್ ತಂಗಡಗಿ ಅವರ ಶಾಸಕರ ನಿಧಿಯಿಂದಲೂ ನೆರವು ಪಡೆಯಿರಿ ಎಂದು ಶಾಸಕ ಮಂತರ್ ಗೌಡ ಅವರಿಗೆ ಸಭೆಯಲ್ಲಿ ಸಲಹೆಯಿತ್ತರು.
ಬಳಿಕ ಶಾಸಕರು ಒತ್ತಾಯಿಸಿದಾಗ “ಬರುತ್ತೇನೆ” ಎಂದು ತಿಳಿಸಿದರು. ಅನಂತರ, ವ್ಯವಸ್ಥಾಪನಾ ಸಮಿತಿಯವರನ್ನುದ್ದೇಶಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು “ನಾನು ಶಾಸಕರು ಸೇರಿ ನಿಮ್ಮ ಯೋಜನೆಯ ಅರ್ಧದಷ್ಟು ಹಣವನ್ನು ಹೊಂದಾಣಿಕೆ ಮಾಡುತ್ತೇವೆ. ಉಳಿದರ್ಧವನ್ನು ನೀವು ಮಾಡಿಕೊಳ್ಳಿ” ಎಂದಾಗ ಶಾಸಕ ಮಂತರ್ ಗೌಡ ಅವರು ಅಷ್ಟೊಂದು ಹಣವನ್ನು ಕೊಡಗಿನಲ್ಲಿ ಸಂಗ್ರಹಿಸುವುದು ಕಷ್ಟ ಸಾಧ್ಯ ಎಂದು ಪ್ರತಿಕ್ರಿಯಿಸಿದರು. ಬಳಿಕ ಸಚಿವರು ಮನವಿ ಪತ್ರ ಸ್ವೀಕಾರ ಸಂದರ್ಭ ಸಹಿ ಹಾಕುವಾಗ ಶಾಸಕ ಮಂತರ್ ಗೌಡ ಅವರು ಧಾರ್ಮಿಕ ದತ್ತಿ ಇಲಾಖೆಯಿಂದ ಕನಿಷ್ಟ 1 ಕೋಟಿ ರು. ಬಿಡುಗಡೆ ಮಾಡುವುದಾಗಿ ಬರೆಯುವಂತೆ ಕೋರಿದಾಗ ನಿರಾಕರಿಸಿದ ಸಚಿವರು “ ವೆರಿ ಇಂಪಾರ್ಟೆಂಟ್ “ ಎಂದಷ್ಟೇ ಬರೆದು ಸಹಿ ಹಾಕಿ ಸುಮ್ಮನಾದರು.
ಓಂಕಾರೇಶ್ವರ ದೇವಾಲಯದ ಜಾಗವೊಂದು ಈ ಹಿಂದೆ ಅತಿಕ್ರಮಣವಾಗಿದ್ದು ಈಗ ನ್ಯಾಯಾಲಯದಲ್ಲಿ ವ್ಯಾಜ್ಯವಿರುವ ಕುರಿತು ಸಮಿತಿ ಸದಸ್ಯರಾದ ವಕೀಲ ಎಂ ಎ. ನಿರಂಜನ್ ಸಭೆಯಲ್ಲಿ ಮಾಹಿತಿಯಿತ್ತರು. ಇದನ್ನು ಕಾನೂನಾತ್ಮಕವಾಗಿ ಪಡೆದುಕೊಳ್ಳಲು ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವ ರಾಮ ಲಿಂಗೇಗೌಡ ಭರವಸೆಯಿತ್ತರು,ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಕೆಂಪೇಗೌಡ ವ್ಯವಸ್ಥಾಪನಾ ಸಮಿತಿಯ ಇನ್ನಿತರ ಸದಸ್ಯರಾದ ಸಂತೋಷ್ ಭಟ್, ಎ. ಕುಶಾಲಪ್ಪ, ಪ್ರಕಾಶ್ ಆಚಾರ್ಯ, ಜಿ.ರಾಜೇಂದ್ರ, ಸಮಿತಿಯ ಕಾರ್ಯ ನಿರ್ವಾಹಣಾಧಿಕಾರಿ ದೇವರಾಜ್ ಉಪಸ್ಥಿತರಿದ್ದರು ಅಲ್ಲದೆ, ಮಡಿಕೇರಿಯ ಉದ್ಯಮಿ ನವೀನ್ ಕುಶಾಲಪ್ಪ ಅವರೂ ಈ ಸಂದರ್ಭ ಹಾಜರಿದ್ದರು.
ಸಭೆಯ ಬಳಿಕ ಸಮಿತಿಯವರೊಂದಿಗೆ ಮಾತನಾಡಿದ ಶಾಸಕ ಮಂತರ್ ಗೌಡ ಅವರು "ಸದ್ಯದಲ್ಲಿಯೇ ನನ್ನ ಶಾಸಕ ನಿಧಿಯಿಂದಲೂ ಸೇರಿದಂತೆ ಮತ್ತಿತರ ಮೂಲಗಳಿಂದ ಹಣ ಒದಗಿಸಿ ಪ್ರಾರಂಭಿಕವಾಗಿ ಅಗತ್ಯವಾಗಿರುವ 1. 50 ಕೋಟಿ ರು. ವೆಚ್ಚದ ಸಮುದಾಯ ಭವನ ನಿರ್ಮಾಣವನ್ನು ಕೈಗೆತ್ತಿಕೊಳ್ಳೋಣ ನಾನೆಂದಿಗೂ ಈ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿ ಕಾರ್ಯದಲ್ಲಿ ನಿಮ್ಮೊಂದಿಗಿದ್ದೇನೆ” ಎಂದು ಭರವಸೆಯಿತ್ತರು.