ಕನ್ನಡಪ್ರಭ ವಾರ್ತೆ ಗುಬ್ಬಿ
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಹೋರಾಟ ಸಮಿತಿಯವರನ್ನು ಕರೆಯದೆ ಅವರನ್ನು ಕತ್ತಲಲ್ಲಿಟ್ಟು ಸಭೆ ನಡೆಸಿರುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ವಿಚಾರವಾಗಿ ಹೋರಾಟಕ್ಕೆ ಪೂರಕವಾಗಿ ಗ್ರಾಮ, ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಶಿಬಿರ ಮಾಡಿ ತಜ್ಞರಿಂದ ಜನರಿಗೆ ಜಿಲ್ಲೆಗೆ ಆಗುವ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಮಾಡಲು ಬಿಡುವುದಿಲ್ಲ. ರಾಜ್ಯ ಸರ್ಕಾರ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಮುಂಚೂಣಿಯಲ್ಲಿರುವುದು ಬೇಸರ ತಂದಿದೆ. ಲಿಂಕ್ ಕೆನಾಲ್ ವಿಚಾರದಲ್ಲಿ ಜನಪ್ರತಿನಿಧಿಗಳನ್ನು ಮಾತ್ರ ಕರೆದಿರುವುದು ರೈತ ಮುಖಂಡರಲ್ಲಿ ಅಸಮಾಧಾನ ತಂದಿದೆ. ಸಭೆಯಲ್ಲಿ ಕೆಲವು ಶಾಸಕರು ಮೌನವಹಿಸಿದ್ದು , ಕೆಲವರು ಲಿಂಕ್ ಕೆನಾಲ್ ಬೇಡ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದ್ದರಿಂದ ಮಾತುಕತೆ ಫಲಪ್ರದವಾಗಿಲ್ಲ. ನೀರಾವರಿ ಸಚಿವರಾದ ಡಿ.ಕೆ ಶಿವಕುಮಾರ್ ಸರಿಯಾದ ಉತ್ತರವನ್ನು ಕೊಡದೆ ಐಎಟಿ ತಜ್ಞರ ವರದಿಯನ್ನು ತರಿಸುತ್ತೇನೆ ಎಂದು ಹೇಳಿದ್ದಾರೆ. ಲಿಂಕ್ ಕೆನಾಲ್ ಕಾಮಗಾರಿ ನಡೆದರೆ ಗುಬ್ಬಿ ತಾಲೂಕಿಗೆ ಮರಣ ಶಾಸನವಾಗುತ್ತದೆ ರೈತರು ಬೀದಿಗೆ ಬೀಳುತ್ತಾರೆ ಎಂದರು.ರೈತ ಮುಖಂಡ ಎ. ಗೋವಿಂದರಾಜು ಮಾತನಾಡಿ, ಬೆಂಗಳೂರಿನಲ್ಲಿ ಹೇಮಾವತಿ ಲಿಂಕ್ ಕೆನಲ್ ವಿಚಾರವಾಗಿ ಕರೆದಿದ್ದ ಸಭೆಯಲ್ಲಿ ಡಿಕೆ ಶಿವಕುಮಾರ್ ಪರ ಮಾತಾಡುವವರು ಅಂತವರನ್ನು ಮಾತ್ರ ಕರೆದಿದ್ದು, ಈ ಸಭೆಗೆ ರೈತ ಹೋರಾಟಗಾರರು ಅಥವಾ ರೈತ ಮುಖಂಡರನ್ನು ಕರೆದಿರುವುದಿಲ್ಲ. ಈ ನಿಟ್ಟಿನಲ್ಲಿ ನಾವು ತಾಲೂಕಿನಲ್ಲಿ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿದರು.ಜೆಡಿಎಸ್ ಮುಖಂಡ ಬಿ.ಎಸ್ ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ಪ್ರಭಾವಿ ಮಂತ್ರಿಗಳು ರೈತರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಈ ಜಿಲ್ಲೆಯ ರೈತ ಮುಖಂಡರ ತಾಕತ್ತು ತೋರಿಸುವುದನ್ನು ಜನಪ್ರತಿನಿಧಿಗಳು ಯೋಚನೆ ಮಾಡಬೇಕು. ತಾಲೂಕಿನ ಜನತೆ ಆಯ್ಕೆ ಮಾಡಿರುವ ಶಾಸಕರು ರೈತರಿಗೆ ನೀರು ಕೊಡಿಸುವಲ್ಲಿ ಮೌನ ವಹಿಸಿರುವುದು ಸರಿಯಲ್ಲ ಹಾಗೂ ಸಭೆಗೆ ಶಾಸಕರು ಗೈರು ಹಾಜರಾಗಿರುವುದು ರೈತರು ಸಂಕಷ್ಟಕ್ಕೆ ಸಿಲುಕಿದಂತೆ ಮಾಡಿದ್ದಾರೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಸರ್ಕಾರ ವಾಮಮಾರ್ಗದಲ್ಲಿ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ನಿರ್ಧಾರ ಮಾಡಿದರೆ, ತುಮಕೂರು ಜಿಲ್ಲೆಯ ರೈತರು ಬಿಡುವುದಿಲ್ಲ. ಜಿಲ್ಲೆಯ ರೈತರು ಜಗ್ಗಲ್ಲ, ಬಗ್ಗಲ್ಲ ಏನು ಬೇಕಾದರೂ ಮಾಡುವುದಕ್ಕೆ ಸಿದ್ದವಿದ್ದೇವೆ ಎಂದರು.ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ಹೆಚ್.ಟಿ.ಭೈರಪ್ಪ , ಬ್ಯಾಟ್ ರಂಗೇಗೌಡ, ಚನ್ನಶೆಟ್ಟಿಹಳ್ಳಿ ಯತೀಶ್ ಕುಮಾರ್, ಹರಿವೇಸಂದ್ರ ಲೋಕೇಶ್, ಶಿವಲಿಂಗೇಗೌಡ, ಶಂಕರ್ ಕುಮಾರ್, ಹಾಗೂ ರೈತ ಮುಖಂಡರಾದ ವೇಂಕಟೇಗೌಡ, ಸಿ.ಜಿ ಲೋಕೇಶ್, ಸತ್ತಿಗಪ್ಪ, ಯತೀಶ್ ಕುಮಾರ್, ಕಾರ್ಯಕರ್ತರು, ರೈತರು, ಭಾಗವಹಿಸಿದ್ದರು.