ಗ್ರಾಪಂಗಳಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಕಡ್ಡಾಯ

KannadaprabhaNewsNetwork | Published : Jun 25, 2024 12:36 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಅಧಿಕ ಮಳೆಯಿಂದಾಗಿ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ‌ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ‌‌ ಕುರಿತು ಗ್ರಾಮ‌ ಪಂಚಾಯತಿಗಳಲ್ಲಿ ಪ್ರತಿ‌ ತಿಂಗಳು ಕಡ್ಡಾಯವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ‌ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಅಧಿಕ ಮಳೆಯಿಂದಾಗಿ ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಾದಲ್ಲಿ‌ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ‌‌ ಕುರಿತು ಗ್ರಾಮ‌ ಪಂಚಾಯತಿಗಳಲ್ಲಿ ಪ್ರತಿ‌ ತಿಂಗಳು ಕಡ್ಡಾಯವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ‌ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯನ್ನು‌ ಸಮರ್ಪಕವಾಗಿ ನಿರ್ವಹಿಸಲು ಗ್ರಾಮ‌ ಪಂಚಾಯತಿ ಮಟ್ಟದಲ್ಲಿ ಈಗಾಗಲೇ ರಚಿಸಲಾದಂತಹ ಟಾಸ್ಕ್‌ಪೋರ್ಸ್‌ ಸಮಿತಿಗಳು ಕಡ್ಡಾಯವಾಗಿ ಸಭೆಗಳನ್ನು ಜರುಗಿಸಿ ಸಭೆಯ ನಡಾವಳಿಗಳನ್ನು ತಪ್ಪದೇ ಜಿಲ್ಲಾಧಿಕಾರಿಗಳ‌ ಕಚೇರಿಗೆ ಕಳುಸಹಿಸುವಂತೆ ತಿಳಿಸಿದರು.ಈಗಾಗಲೇ‌ ಗುರುತಿಸಲಾದ ಪ್ರವಾಹ‌ಕ್ಕೆ ತುತ್ತಾಗಬಹುದಾದ ಗ್ರಾಮ‌ ಪಂಚಾಯತಿಗಳು ಪ್ರತಿ ಹದಿನೈದು ದಿನಗಳಿಗೊಮ್ಮೆ ಸಭೆ ಜರುಗಿಸಬೇಕು. ಪ್ರವಾಹ ಸಂದರ್ಭದಲ್ಲಿ ಗ್ರಾಮ‌ ಪಂಚಾಯತಿಗಳ‌ ಪಾತ್ರ ಅತೀ‌ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ‌ ವಿಪತ್ತು ನಿರ್ವಹಣಾ ಸಭೆಗಳನ್ನು ಕಡ್ಡಾಯವಾಗಿ ಜರುಗಿಸಬೇಕು ಎಂದರು.ಜಿಲ್ಲೆಯ ನಗರ, ಸ್ಥಳೀಯ-ಸಂಸ್ಥೆ ಹಾಗೂ ಗ್ರಾಮ‌ ಪಂಚಾಯತಿಗಳಲ್ಲಿ ಗುರುತಿಸಲಾದ ಪರಿಹಾರ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಕೇಂದ್ರಗಳಲ್ಲಿನ ಸೌಲಭ್ಯಗಳ ಕುರಿತು ಪರಿಶೀಲಿಸಿ ಸಂಪೂರ್ಣ ವಿವರವನ್ನು ಛಾಯಾಚಿತ್ರಗಳೊಂದಿಗೆ ಒದಗಿಸಬೇಕು.‌ ಇದರ ಜೊತೆಗೆ ಗೋಶಾಲೆಗಳ ವಿವರವನ್ನು ಒದಿಗಿಸಬೇಕು ಎಂದು ಸೂಚಿಸಿದರು.ಪ್ರವಾಹ ಸಂದರ್ಭದಲ್ಲಿ ಉದ್ಭವಿಸಬಹುದಾದ ಸಾಂಕ್ರಾಮಿಕ ರೋಗಗಳ‌ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಅಗತ್ಯವಿರುವ ಔಷಧಿಗಳನ್ನು ಈಗಿನಿಂದಲೇ ದಾಸ್ತಾನು‌ ಮಾಡಿಟ್ಟುಕೊಳ್ಳುವದರ ಜೊತೆಗೆ ವಿಷ ಜಂತುಗಳ ಕಡಿತದಿಂದಾಗುವ ಸಾವು‌ ನೋವು ತಪ್ಪಿಸಲು ಬೇಕಾದಂತಹ ಔಷಧಿಗಳನ್ನು ತಪ್ಪದೇ ದಾಸ್ತಾನು‌ ಮಾಡಿಟ್ಟುಕೊಳ್ಳಬೇಕು. ಪ್ರವಾಹ ಪರಿಸ್ಥಿತಿ ಸಮರ್ಪಕವಾಗಿ ನಿರ್ವಹಿಸಲು ನೋಡೆಲ್‌ ಅಧಿಕಾರಿಗಳನ್ನು‌ ನೇಮಿಸಲಾಗಿದ್ದು, ಎಲ್ಲ ನೋಡೆಲ್‌ ಅಧಿಕಾರಿಗಳು ಸಮನ್ವಯದೊಂದಿಗೆ ‌ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.ಜಿಲ್ಲಾ‌ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮ‌ ಪಂಚಾಯತಿಗಳಲ್ಲಿ ಟಾಸ್ಕ್‌ಪೋರ್ಸ್‌ ಸಮಿತಿ ಸಭೆಗಳನ್ನು ಜರುಗಿಸುವುದರ ಜೊತೆಗೆ ನದಿ‌ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ‌ ಕ್ರಮಗಳ ಕುರಿತು ಕೇಂದ್ರ ಹಾಗೂ ರಾಜ್ಯ ವಿಪತ್ತು‌ ನಿರ್ವಹಣಾ ತಂಡಗಳಿಂದ ಪ್ರಾತ್ಯಕ್ಷಿಕೆ ನೀಡಲು ಕ್ರಮಕೈಗೊಳ್ಳಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ‌ ಪಂಚಾಯತಿ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬೆಳಗಾವಿ ಮಹಾನಗರ‌ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ‌‌ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕೋಟ್‌...

ಸಹಾಯವಾಣಿ ಕೇಂದ್ರ ಆರಂಭಿಸಿಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಸಹಾಯವಾಣಿ ಕೇಂದ್ರಗಳಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಣೆಗಾಗಿ ಇತರೆ ಇಲಾಖೆಗಳ ಸಿಬ್ಬಂದಿಯನ್ನು ಪಾಳಿ ಪ್ರಕಾರ ನಿಯೋಜಿಸಬೇಕು. ಬೆಳಗಾವಿ ನಗರದಲ್ಲಿ‌ ಪ್ರತಿ ವಾರ್ಡ್‌ಗಳಿಗೆ ಹತ್ತು ಜನರ ತಂಡವನ್ನು ರಚಿಸಿ ಅವರ ಸಂಪರ್ಕ ವಿವರಗಳನ್ನು ಪ್ರಚಾರಗೊಳಿಸುವುದರ ಜೊತೆಗೆ ನಗರದಲ್ಲಿನ ಚರಂಡಿಗಳನ್ನು ಸ್ಬಚ್ಚಗೊಳಿಸಲು ಕ್ರಮ‌ಕೈಗೊಳ್ಳಬೇಕು.-ನಿತೇಶ್ ಪಾಟೀಲ, ಜಿಲ್ಲಾಧಿಕಾರಿ‌.

Share this article