ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಿಬಿಡಿಎ ಕಚೇರಿಯ ಸಭಾಂಗಣದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರ ಸಭೆಯ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆ ಪರವಾದ ರೈತರು ತಮ್ಮ ಅಹವಾಲು ಆಲಿಸುವಂತೆ ಒತ್ತಾಯಿಸಿದ್ದರಿಂದ ಸಭೆ ನಡೆಸಿದ್ದೇನೆ. ಈ ರೈತರು ಕೂಡ ಸಿಎಂ ಅವರೊಂದಿಗೆ ಚರ್ಚಿಸಲು ಸಮಯ ಕೇಳಿದ್ದಾರೆ. ಹಾಗಾಗಿ ಪರ ಮತ್ತು ವಿರೋಧ ಇರುವ ರೈತರ ಸಿಎಂ ಭೇಟಿಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿ ಪಡಿಸಲಾಗುವುದು ಎಂದರು.
ಭೂ ಸ್ವಾಧೀನ ಪರ ಇರುವ ರೈತರು ಅಂತಿಮ ನೋಟಿಫಿಕೇಷನ್ ಗೆ ಆಗ್ರಹಿಸಿದ್ದಾರೆ. ಪ್ರೈಮರಿ ನೋಟಿಫಿಕೇಷನ್ ಹೊರಡಿಸಿ ಒಂದು ವರ್ಷವಾಗಿದೆ. ಕೇವಲ ಕತೆ ಹೇಳಿಕೊಂಡು ಬರುತ್ತಿದ್ದೀರಿ. ಇಲ್ಲಿ ದೊರೆಯುವ ಪರಿಹಾರದ ಹಣವನ್ನು ಬೇರೆ ಕಡೆ ಭೂಮಿ ಖರೀದಿಸಬೇಕು. ಭೂಮಿಯ ಬೆಲೆ ಹೆಚ್ಚಾಗುತ್ತಿದೆ. ಪರಿಹಾರ ಸಿಗುವುದು ವಿಳಂಬವಾದರೆ ಸಮಸ್ಯೆಯಾಗುತ್ತದೆ ಎಂದು ಭೂಸ್ವಾಧಿನದ ಪರ ಇರುವ ರೈತರು ಅಹವಾಲು ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.ಅಂತಿಮ ನೋಟಿಫಿಕೇಷನ್ ಆಗಿರುವ ಪ್ರದೇಶಗಳಲ್ಲಿ ತಕ್ಷಣ ಜೆಎಂಸಿ ಪ್ರಕ್ರಿಯೆ ಆರಂಭಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ರೈತರು ತಾವು ಬೆಳೆದಿರುವ ಬೆಳೆಗಳ ಬಗ್ಗೆ ಆತಂಕ ಇದೆ. ಹವಾಮಾನ ಕಾರಣ ಬೆಳೆಗಳಿಗೆ ನಷ್ಟವಾದರೆ ಜೆಎಂಸಿ ವೇಳೆ ತಮಗೆ ಲಭ್ಯವಾಗಬಹುದಾದ ಪರಿಹಾರ ಸಿಗದೆ ಹೋಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜೆಎಂಸಿಗೆ ಒಪ್ಪಿಗೆ ಸೂಚಿಸಿದ್ದೇವೆ ಎಂದರು.
ಸಂತೋಷ್ ಹೆಗ್ಡೆಯವರು ಭೂಸ್ವಾಧೀನಕ್ಕೆ ವಿರುದ್ದವಾಗಿರುವವರ ಬಳಿ ಮಾತನಾಡಿದ್ದಾರೆ. ಅವರು ಪರವಾಗಿರುವ ರೈತರ ಬಳಿಯೂ ಮಾತನಾಡಿದರೆ, ಅವರಿಗೆ ಇನ್ನೂ ಹೆಚ್ಚಿನ ವಿಚಾರ ಗೊತ್ತಾಗುತ್ತದೆ. ಈ ಯೋಜನೆ ಇಷ್ಟು ದಿನ ಏಕೆ ನೆನೆಗುದಿಗೆ ಬಿದ್ದಿತ್ತು, ಈಗೇಕೆ ರೈತರು ಯೋಜನೆ ಪರವಾಗಿದ್ದಾರೆ ಎಂಬುದು ತಿಳಿಯುತ್ತದೆ. ಭೂಸ್ವಾಧೀನದ ಪರ ಇರುವ ರೈತರು ಸಹ ಸಂತೋಷ್ ಹೆಗ್ಡೆ ಅವರನ್ನು ಭೇಟಿ ಮಾಡಿ ತಮ್ಮ ಅನಿಸಿಕೆಗಳನ್ನು ಆಲಿಸುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಬಾಲಕೃಷ್ಣ ಹೇಳಿದರು.