ಕನ್ನಡಪ್ರಭ ವಾರ್ತೆ ಮೈಸೂರುಒಳ ಮೀಸಲಾತಿ ಪರವಾಗಿರುವ ಸಿದ್ದರಾಮಯ್ಯ ಅವರನ್ನು ನಾವು ಬೆಂಬಲಿಸಿ ಶಕ್ತಿ ತುಂಬಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮಾದಿಗ ಸಮುದಾಯ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆ ದೇಶ, ವಿದೇಶಗಳಲ್ಲೂ ಇಲ್ಲ. ಈ ಯೋಜನೆಯಿಂದ ದಲಿತರು, ಹಿಂದುಳಿದ ವರ್ಗಗಳಿಗೆ ಆರ್ಥಿಕ ಶಕ್ತಿ ತುಂಬಿದೆ ಎಂದರು.ಈ ಯೋಜನೆಗಳಿಂದ ಬಡವರು, ಶೋಷಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. 500 ಕೋಟಿ ಮಹಿಳಾ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಕನಿಷ್ಟ 10 ಕಿ.ಮೀ. ನಿಂದ ನೂರಾರು ಕಿ.ಮೀ ದೂರದವರೆಗೆ ಧಾರ್ಮಿಕ, ಪ್ರವಾಸಿ ತಾಣಗಳಿಗೆ ತೆರಳಿ ದರ್ಶನ ಪಡೆದಿದ್ದಾರೆ. ಶಕ್ತಿ ಯೋಜನೆ ಹೆಣ್ಣು ಮಕ್ಕಳ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗಿದೆ ಎಂದು ಅವರು ಹೇಳಿದರು.ಸರ್ಕಾರದ ಯೋಜನೆಗಳನ್ನು ಜನರು ಉಪಯೋಗಿಸಿಕೊಂಡರೂ ಉತ್ತಮ ಕಾರ್ಯಕ್ರಮಗಳ ಕುರಿತಾಗಿ ಸರಿಯಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಗ್ಯಾರಂಟಿ ಟೀಕೆ ಮಾಡುವ ಬಿಜೆಪಿ, ಜೆಡಿಎಸ್‌ನವರು ಉಚಿತವಾಗಿ ಪ್ರಯಾಣ ಮಾಡಿಸುವುದಾಗಿ ಹೇಳಲಿ ಎಂದು ಅವರು ಸವಾಲು ಹಾಕಿದರು.ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸುಮಾರು ಒಂದುವರೆ ಲಕ್ಷ ಮಂದಿ ಪಾಲ್ಗೊಳ್ಳಲಿದ್ದು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.ಮಾಜಿ ಮೇಯರ್ ನಾರಾಯಣ ಮಾತನಾಡಿ, ಜು. 19 ರಂದು ನಡೆಯುವ ಸಾಧನಾ ಸಮಾವೇಶವನ್ನು ರಾಜ್ಯಾದ್ಯಂತ ಆಯೋಜಿಸಲಾಗುತ್ತಿದೆ. ಈಗ ಮೈಸೂರು ವಿಭಾಗದ ಸಮಾವೇಶ ನಡೆಯುತ್ತಿದೆ. ಸರ್ಕಾರದ ಕಾರ್ಯಕ್ರಮ ಆಗಿರುವುದರಿಂದ ಹೆಚ್ಚು ಜನರನ್ನು ಸೇರಿಸಬೇಕು. ನಮ್ಮ ಸಮುದಾಯದಿಂದ ಹೆಚ್ಚಿನ ಜನರು ಸೇರಬೇಕು ಎಂದು ಅವರು ಮನವಿ ಮಾಡಿದರು.ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ವರದಿ ಕೊಟ್ಟ ಕೂಡಲೇ ಒಂದು ವಾರದಲ್ಲಿ ಒಳ ಮೀಸಲನ್ನು ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಸಮಾಜದ ಕೆಲವು ಮುಖಂಡರು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮತ್ತು ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.ಮಾದಿಗ ಸಮುದಾಯದ ಜಿಲ್ಲಾಧ್ಯಕ್ಷ ಎಡತೊರೆ ನಿಂಗರಾಜು, ಚಾಮರಾಜನಗರ ಜಿಲ್ಲಾ ಆದಿಜಾಂಬವ ಮಹಾಸಭಾದ ಅಧ್ಯಕ್ಷ ಎಂ.ಶಿವಮೂರ್ತಿ, ವಿಜಯಶಂಕರ್, ರಾಮು, ಶಿವಣ್ಣ, ಪ್ರಕಾಶ್, ನಾಗರಾಜು, ರೇವಣ್ಣ, ಜಯಶಂಕರ್ ಮೊದಲಾದವರು ಇದ್ದರು.