ಭದ್ರಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಸಮಸ್ಯೆ ನಿವಾರಣೆಗೆ ಶೀಘ್ರ ಸಭೆ

KannadaprabhaNewsNetwork |  
Published : Dec 17, 2023, 01:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ಅಡ್ಡಿಯಾಗಿರುವ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜನವರಿ ಎರಡನೇ ವಾರ ಸಮನ್ವಯ ಸಮಿತಿ ಸಭೆ ನಡೆಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮುಖಂಡರಿಗೆ ಭರವಸೆ ನೀಡಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಮುಖಂಡರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗಭದ್ರಾ ಮೇಲ್ದಂಡೆ ಯೋಜನೆಗೆ ಅಡ್ಡಿಯಾಗಿರುವ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜನವರಿ ಎರಡನೇ ವಾರ ಸಮನ್ವಯ ಸಮಿತಿ ಸಭೆ ನಡೆಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಶನಿವಾರ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಮಾತನಾಡಿದ ಅವರು, ತರೀಕೆರೆ ತಾಲೂಕಿನಲ್ಲಿ ಭೂ ಸ್ವಾಧೀನ ಸಮಸ್ಯೆ ಇದೆ. ಹಾಗಾಗಿ ಸಭೆಯನ್ನು ಚಿತ್ರದುರ್ಗದಲ್ಲಿ ಕರೆಯಬೇಕೋ ಅಥವಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜಿಸಬೇಕೋ ಎಂಬುದರ ಬಗ್ಗೆ ಎರಡೂ ಜಿಲ್ಲೆಗಳ ಶಾಸಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಭದ್ರಾ ಮೇಲ್ದಂಡೆ ವಿಚಾರ ಬೆಳಗಾವಿ ಅಧಿವೇಶನದಲ್ಲಿಯೂ ಚರ್ಚೆಯಾಗಿದೆ. ಶಾಸಕ ರಘುಮೂರ್ತಿ ಸರ್ಕಾರದ ಗಮನ ಸೆಳೆದಿದ್ದಾರೆ. ನಾವೂ ಕೂಡಾ ಸಚಿವ ಡಿ.ಕೆ.ಶಿವಕುಮಾರ್ ಜತೆ ಮಾತನಾಡಿದ್ದು, ಈ ತಿಂಗಳಲ್ಲಿ ಸಭೆ ಮಾಡುವ ಬಗ್ಗೆ ವಿನಂತಿಸಿದ್ದೇವೆ. ಡಿಸೆಂಬರ್‌ನಲ್ಲಿ ಬೇಡ ಎಂದಿದ್ದ ರಿಂದ ಜನವರಿಯಲ್ಲಿ ಸಭೆ ನಡೆಸುತ್ತೇವೆ. ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿ ವಾಸ್ತವಾಂಶಗಳ ಕ್ರೋಡೀಕರಿಸಲಾಗುವುದೆಂದರು.

ಶಾಸಕ ಟಿ.ರಘುಮೂರ್ತಿ ಮಾತನಾಡಿ, ಭದ್ರಾ ಮೇಲ್ದಂಡೆ ವಿಚಾರವಾಗಿ ಜಿಲ್ಲೆಯ ಎಲ್ಲ ಶಾಸಕರು ಒಟ್ಟಾಗಿದ್ದೇವೆ. ಯೋಜನೆ ನೀರಿಗೆ ಮೇಲ್ಭಾಗದ ಅರಸೀಕೆರೆಯವರು ಕಣ್ಣು ಹಾಕುವ ಸಾಧ್ಯತೆಗಳು ಹೆಚ್ಚಿವೆ. ಟೇಲ್ ಎಂಡ್‌ಗೆ ನೀರು ಹಾಯಿಸಲೇಬೇಕು. ಚಳ್ಳಕೆರೆ, ಮೊಳಕಾಲ್ಮೂರು, ಜಗಳೂರು ಭಾಗಕ್ಕೆ ನೀರು ಹೋಗಲೇಬೇಕು. ಈಗಾಗಲೇ ಹಂಚಿಕೆಯಾಗಿರುವ ನೀರು ಹೊಸದಾಗಿ ಬೇರೆ ತಾಲೂಕಿಗೆ ಹೋಗದಂತೆ ಎಚ್ಚರ ವಹಿಸಿದ್ದೇವೆ. ಅಗತ್ಯ ಬಂದಲ್ಲಿ ನ್ಯಾಯಾಲಯದ ಮೊರೆ ಹೋಗಲು ಸಿದ್ಧವಿರುವುದಾಗಿ ಹೇಳಿದರು. ಭದ್ರಾ ಮೇಲ್ದಂಡೆಗೆ ಕೇಂದ್ರ ಘೋಷಿಸಿರುವ 5300 ಕೋಟಿ ರುಪಾಯಿ ಅನುದಾನ ತರುವ ಬಗ್ಗೆ ಮುಖ್ಯಮಂತ್ರಿಗಳು ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಸರ್ವ ಪಕ್ಷಗಳ ನಿಯೋಗ ತೆರಳಲು ಉದ್ದೇಶಿಸಿದ್ದು ಪ್ರತಿ ಪಕ್ಷದ ನಾಯಕರಲ್ಲಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿಕೊಡುವಂತೆ ವಿನಂತಿಸಿದ್ದಾರೆ ಎಂದು ರಘುಮೂರ್ತಿ ಹೇಳಿದರು. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಅಬ್ಬಿನಹೊಳಲು ಸಮಸ್ಯೆ ಬಗೆ ಹರಿದಿದ್ದರೆ ಇಷ್ಟೊತ್ತಿಗೆ ಹೊಳಲ್ಕೆರೆ ತಾೂಲೂಕಿನ ಕೆರೆಗಳು ತುಂಬುತ್ತಿದ್ದವು. ಮುಂಬರುವ ಬೇಸಿಗೆಯಲ್ಲಾದರೂ ಕಾಲುವೆ ನಿರ್ಮಾಣದ ಕೆಲಸ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಇಚ್ಛಾ ಶಕ್ತಿಗಳು ಪ್ರದರ್ಶನವಾಗಬೇಕಿದೆ. ಸಮನ್ವಯ ಸಮಿತಿ ಸಭೆಯಲ್ಲಿ ಎಲ್ಲವೂ ಅಂತಿಮವಾಗುವಂತೆ ಜಿಲ್ಲೆಯ ಶಾಸಕರು, ಸಚಿವರು ನೋಡಿಕೊಳ್ಳಬೇಕೆಂದು ಮನವಿ ಮಾಡಿದರು. ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.

----------------------ಯೋಜನೆ ಅನುಷ್ಠಾನಕ್ಕೆ ಉದಾಸೀನ ತೋರಿಲ್ಲ

ಭದ್ರಾ ಮೇಲ್ದಂಡೆ ಕಾಮಗಾರಿಗೆ ನಾವ್ಯಾರೂ ಉದಾಸೀನ ತೋರಿಲ್ಲ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು. ಅಧಿಕಾರಿಗಳ ಮೂಲಕ ಶೀಘ್ರ ಕಾರ್ಯನುಷ್ಠಾನಕ್ಕೆ ಒತ್ತಡ ಹೇರಿದ್ದೇವೆ. ಅಬ್ಬಿನಹೊಳಲು ಬಳಿಯ ಭೂ ಸ್ವಾಧೀನ ತೊಡಕು ನಿವಾರಣೆ ಅಲ್ಲಿನ ಶಾಸಕರ ಸಮ್ಮುಖದಲ್ಲಿಯೇ ಆಗಬೇಕಿದೆ. ಈ ವಿಷಯವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇವೆ. ಬಗೆ ಹರಿಸುವ ಭರವಸೆ ನೀಡಿದ್ದಾರೆಂದರು.--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಲಿಂಡರ್‌ ಬೆಲೆ ಹೆಚ್ಚಳ ಶರಣಾಗತಿಯ ಫಲ: ಸಿಎಂ
ಹಳ್ಳಿಗಳಿಗೂ ಎಲೆಕ್ಟ್ರಿಕ್‌ ಬಸ್‌ ಓಡಿಸಲು ಸಿದ್ಧತೆ?