ಕಬ್ಬು ದರ ನಿಗದಿ ಕುರಿತು ಇಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ

KannadaprabhaNewsNetwork |  
Published : Nov 23, 2026, 02:15 AM IST
ರುದ್ರಪ್ಪ ಲಮಾಣಿ | Kannada Prabha

ಸಾರಾಂಶ

ಕಬ್ಬಿನ ಬೆಲೆ ನಿಗದಿ ಸಂಬಂಧ ಸೋಮವಾರ (ನ.23) ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಜವಳಿ ರಫ್ತು ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಇರುವುದರಿಂದ ಅದರಲ್ಲಿ ಪಾಲ್ಗೊಳ್ಳಬೇಕಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಕಬ್ಬಿನ ಬೆಲೆ ನಿಗದಿ ಸಂಬಂಧ ಸೋಮವಾರ (ನ.23) ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಜವಳಿ ರಫ್ತು ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಇರುವುದರಿಂದ ಅದರಲ್ಲಿ ಪಾಲ್ಗೊಳ್ಳಬೇಕಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಾದರಿಯಲ್ಲಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ಪ್ರತಿ ಟನ್ ಕಬ್ಬಿಗೆ 3,600 ರು. ದರ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಜಿಲ್ಲೆಯ ಎಲ್ಲ ರೈತರಿಗೂ ಒಂದೇ ದರ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕರೆದು ಚರ್ಚೆ ನಡೆಸಿದ್ದೇನೆ ಎಂದರು.

ಹಾವೇರಿ ಭಾಗದಲ್ಲಿ ಕಬ್ಬಿನ ಇಳುವರಿ ಕಡಿಮೆ ಇರುವುದರಿಂದ ಬೆಳಗಾವಿ ಭಾಗದಲ್ಲಿ ನೀಡುವಷ್ಟು ದರ ನೀಡಲು ಸಾಧ್ಯವಿಲ್ಲ ಎಂದು ಕಾರ್ಖಾನೆ ಮಾಲೀಕರು ಹೇಳುತ್ತಿದ್ದಾರೆ. ನಾನೂ ಮತ್ತು ನಮ್ಮ ಕಮಿಷನರ್ ಸೇರಿ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ನಡೆಸಿ, ಸ್ವಲ್ಪ ಹೆಚ್ಚು-ಕಡಿಮೆ ಸರಿದೂಗಿಸಿಕೊಂಡು ಹೋಗುವಂತೆ ತಿಳಿಸಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳಿಗೂ ಈ ಕುರಿತು ತಿಳಿಸಿದ್ದೇನೆ ಎಂದರು.

ವಿಜಯಪುರ ಸೇರಿದಂತೆ ಹಲವು ಕಡೆ ರೈತರು ಮತ್ತು ಕಾರ್ಖಾನೆ ಮಾಲೀಕರು ಪರಸ್ಪರ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಸರ್ಕಾರದ ತೀರ್ಮಾನವೇ ಅಂತಿಮ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ. ಸೋಮವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಅಂತಿಮವಾಗಿ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಸಭೆಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಭಾಗವಹಿಸುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸಭೆಯಲ್ಲಿ ರೈತರ ಬೇಡಿಕೆ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದರು.

ಬಸವಣ್ಣನವರ ಅವಹೇಳನ ದೊಡ್ಡತಪ್ಪು..

ವಿಶ್ವನಾಯಕ ಬಸವಣ್ಣನವರ ಕುರಿತ ಬಸವ ಮಂಟಪ ಪುಸ್ತಕದ ವಿವಾದದ ಕುರಿತು ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ. ಈ ವಿಚಾರ ಎಲ್ಲ ಸಚಿವರ ಗಮನಕ್ಕೂ ಬಂದಿದೆ. ಬಸವಣ್ಣನವರ ಸಿದ್ಧಾಂತಗಳ ಕುರಿತು ಭಿನ್ನಾಭಿಪ್ರಾಯಗಳು ಇರುವುದು ಸಹಜ. ವಿಚಾರಧಾರೆಗಳ ಬಗ್ಗೆ ಚರ್ಚೆ ನಡೆಸುವುದನ್ನು ಒಪ್ಪಬಹುದು. ಆದರೆ, ಬಸವಣ್ಣನವರು ಇಂತಹವರು, ಅಂತಹವರು ಎಂದು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದರು.

ನಾವ್ಯಾರೂ ಬಸವಣ್ಣನವರ ಕಾಲದಲ್ಲಿ ಹುಟ್ಟಿದವರಲ್ಲ. ಆದರೆ, ಅವರು ಮಾನವ ಕುಲಕ್ಕೆ ನೀಡಿರುವ ಕೊಡುಗೆ ಬಹಳ ದೊಡ್ಡದು. ವಿಶ್ವಕ್ಕೆ ಗುರು ಎಂಬ ಗೌರವವನ್ನು ನಾವು ಅವರಿಗೆ ನೀಡಿದ್ದೇವೆ. ಜಗತ್ತಿಗೆ ಪಾರ್ಲಿಮೆಂಟ್ ಪರಿಕಲ್ಪನೆಯನ್ನು ಕಲಿಸಿಕೊಟ್ಟ ಮಹಾನ್ ನಾಯಕ ಬಸವಣ್ಣನವರು. ಅವರ ಸಿದ್ಧಾಂತಗಳ ಆಧಾರದ ಮೇಲೆ ಮಠಮಾನ್ಯಗಳು ಹಾಗೂ ಸಮಾಜದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎಂದು ಹೇಳಿದರು.

ಸುಮಾರು 800 ವರ್ಷಗಳ ಹಿಂದಿನ ಬಸವಣ್ಣನವರ ಕುರಿತು ಇಂದು ಏನೇನೋ ಊಹೆಗಳನ್ನು ಮಾಡಿಕೊಂಡು ಮಾತನಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳ ಅಗತ್ಯವೇ ಇರಲಿಲ್ಲ. ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರನ್ನು ಗಡಿಪಾರು ಮಾಡಬೇಕು. ಇಂತಹ ಹೇಳಿಕೆಗಳನ್ನು ನೀಡಿ ಒಂದು ಸಮುದಾಯಕ್ಕೆ, ಸಮಾಜಕ್ಕೆ ನೋವುಂಟು ಮಾಡುವ ಕೆಲಸ ಮಾಡಬಾರದು. ಇಂತಹವರಿಗೆ ಜನರು ಕೂಡ ತಕ್ಕ ಪಾಠ ಕಲಿಸಬೇಕು ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬರದಲ್ಲಿ ಆಸರೆಯಾದ ಕಳಸಕೊಪ್ಪ ಕೆರೆ
ಬೆಳಗಾವಿಯಲ್ಲಿ ಮಟಕಾ ದಂಧೆ ಮೇಲೆ ಪೊಲೀಸರ ಸರಣಿ ದಾಳಿ