ಸರ್ಕಾರಿ ನಿಯಮ ಗಾಳಿಗೆ ತೂರಿದ ಮೆಗಾ ಫುಡ್ ಪೇವರಿಚ್ ಕಂಪನಿ..!

KannadaprabhaNewsNetwork |  
Published : Sep 23, 2025, 01:03 AM IST
22ಕೆಎಂಎನ್ ಡಿ29 | Kannada Prabha

ಸಾರಾಂಶ

ಕೆಐಡಿಬಿಯಿಂದ ಸುಮಾರು 300ಕ್ಕೂ ಅಧಿಕ ಎಕರೆಯಷ್ಟು ಭೂಮಿ ಸ್ವಾಧೀನ ಮಾಡಿಕೊಂಡು ಆಹಾರ ಉತ್ಪನ್ನ ಮತ್ತು ಶಿಥಲೀಕರಣ ಘಟಕ ನಿರ್ಮಾಣಕ್ಕಾಗಿ ಮೆಗಾ ಫೇವರಿಚ್ ಫುಡ್ ಕಂಪನಿಗೆ ಭೂಮಿ ನೀಡಲಾಗಿತ್ತು. ಆದರೆ, ಕಳೆದೊಂದು ದಶಕದ ಹಿಂದೆ ಕಾರ್ಯಾರಂಭ ಮಾಡಿರುವ ಕಂಪನಿ ಸರ್ಕಾರಿ ಕಟ್ಟೆ ಅನಧಿಕೃತವಾಗಿ ಮುಚ್ಚಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ತೆಂಡೇಕೆ ಬಳಿಯ ಮೆಗಾ ಫುಡ್ ಪೇವರಿಚ್ ಕಂಪನಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಗ್ರಾಮೀಣ ರಸ್ತೆಯನ್ನು ಮುಚ್ಚಿ ಗ್ರಾಮಸ್ಥರಿಗೆ ತೊಂದರೆ ನೀಡಿದ್ದು, ಸರ್ಕಾರಿ ಕಟ್ಟೆಯನ್ನು ಅತಿಕ್ರಮಿಸಿ ದುರ್ವತನೆ ಪ್ರದರ್ಶಿಸಿದೆ. ಕಂಪನಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಶಾಸಕ ಎಚ್.ಟಿ.ಮಂಜು ಆಗ್ರಹಿಸಿದರು.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮೈಸೂರು- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಿಂದ ಬಣ್ಣೇನಹಳ್ಳಿಯನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆ ನಿರ್ಮಿಸಲಾಗಿದೆ. ಸದರಿ ರಸ್ತೆಯಲ್ಲಿ ಗ್ರಾಮಸ್ಥರು ನೂರಾರು ವರ್ಷಗಳಿಂದ ಸಂಚರಿಸುತ್ತಿದ್ದಾರೆ ಎಂದರು.

ಕೆಐಡಿಬಿಯಿಂದ ಸುಮಾರು 300ಕ್ಕೂ ಅಧಿಕ ಎಕರೆಯಷ್ಟು ಭೂಮಿ ಸ್ವಾಧೀನ ಮಾಡಿಕೊಂಡು ಆಹಾರ ಉತ್ಪನ್ನ ಮತ್ತು ಶಿಥಲೀಕರಣ ಘಟಕ ನಿರ್ಮಾಣಕ್ಕಾಗಿ ಮೆಗಾ ಫೇವರಿಚ್ ಫುಡ್ ಕಂಪನಿಗೆ ಭೂಮಿ ನೀಡಲಾಗಿತ್ತು. ಆದರೆ, ಕಳೆದೊಂದು ದಶಕದ ಹಿಂದೆ ಕಾರ್ಯಾರಂಭ ಮಾಡಿರುವ ಕಂಪನಿ ಸರ್ಕಾರಿ ಕಟ್ಟೆ ಅನಧಿಕೃತವಾಗಿ ಮುಚ್ಚಿದೆ. ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಜನರಿಗೆ ಓಡಾಡದಂತೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿರುವುದನ್ನು ಖಂಡಿಸಿದರು.

ಈ ಬಗ್ಗೆ ಶಾಸಕರು, ರಸ್ತೆ ಮುಚ್ಚಿ ಜನರಿಗೆ ತೊಂದರೆ, ಸರ್ಕಾರಿ ಕಟ್ಟೆ ಅತಿಕ್ರಮ, ಕಲುಷಿತ ತ್ಯಾಜ್ಯ ನೀರನ್ನು ಬಿಡುಗಡೆ, ಕಟ್ಟೆ ಸಂಪೂರ್ಣ ಕಲುಷಿತಗೊಂಡು ನೀರು ಜನ ಜಾನುವಾರುಗಳ ಬಳಕೆಗೆ ಯೋಗ್ಯವಾಗಿಲ್ಲದ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದರು.

ಕಳೆದ ವಾರ ನಡೆದ ಕೆಡಿಪಿ ಸಭೆಯಲ್ಲಿಯೂ ಹೇಮಗಿರಿ ಸಕ್ಕರೆ ಕಾರ್ಖಾನೆಯಿಂದ ಕಲುಷಿತ ನೀರು ಮತ್ತು ಮೆಗಾ ಫುಡ್ ಫೇವರಿಚ್ ಕಂಪನಿಯ ಕಲುಷಿತ ನೀರನ್ನು ಪ್ರದರ್ಶಿಸಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದರು. ಇಂದು ಬೆಂಗಳೂರಿನಿಂದ ಕೆಐಡಿಬಿ ಅಧಿಕಾರಿಗಳೊಂದಿಗೆ ಕಂಪನಿ ಅತಿಕ್ರಮಿಸಿರುವ ಸಾರ್ವಜನಿಕ ರಸ್ತೆ ಮತ್ತು ಕಲುಷಿತ ನೀರಿನಿಂದ ಆವೃತ್ತವಾಗಿರುವ ಕಟ್ಟೆ ಪರಿಶೀಲನೆ ನಡೆಸಿದರು.

ಮೈಸೂರು ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಅಶೋಕನಗರದಿಂದ ಬಣ್ಣೇನಹಳ್ಳಿಗೆ ಹೋಗುವ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಲು ಸರ್ಕಾರದಿಂದ ನಾಲ್ಕು ಕೋಟಿ ಅನುದಾನ ಬಿಡುಗಡೆಯಾಗಿದೆ. ಈಗ ರಸ್ತೆಯನ್ನು ಕಂಪನಿ ಭಾಗಶಃ ಅತಿಕ್ರಮಿಸಿಕೊಂಡಿದೆ ಎಂದರು.

ಫ್ಯಾಕ್ಟರಿಯ ಮಾಲಿನ್ಯ ತ್ಯಾಜ್ಯ ನೀರು ಕೆರೆಕಟ್ಟೆಗಳಿಗೆ ಹರಿಸಲಾಗುತ್ತಿದೆ. ಸಾರ್ವಜನಿಕ ರಸ್ತೆ ಅತಿಕ್ರಮಿಸಿ ಜನರು ಸಂಚಾರ ಮಾಡದಂತೆ ತಡೆಗೋಡೆ ನಿರ್ಮಿಸಿದ್ದರೂ ಅದನ್ನು ತೆರವು ಮಾಡಿ ಕಂಪನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ. ಇದ್ದ ಕಟ್ಟೆಯನ್ನು ಮುಚ್ಚಿ ಸುಪ್ರೀಂ ಕೋರ್ಟ್ ಆದೇಶವನ್ನುಉಲ್ಲಂಘಿಸಿದೆ ಎಂದು ದೂರಿದರು.

ನಾನು ಯಾವುದೇ ಕಾರ್ಖಾನೆಗಳಿಗೂ ವಿರೋಧಿಯಲ್ಲ. ಆದರೆ ಕಾರ್ಖಾನೆ ನಡೆಸುವವರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಜನರಿಗೆ ಕಿರುಕುಳ ನೀಡಬಾರದು ಎಂದು ಹೇಳಿದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರು ಕಂಪನಿ ವಿರುದ್ದ ಹಲವು ಆರೋಪಗಳನ್ನು ಮಾಡಿದರು.

ಸಮಸ್ಯೆಗಳ ನಿವಾರಣೆ ಸಂಬಂಧ ಎಲ್ಲಾ ಇಲಾಖೆಗಳ ತಜ್ಞರನ್ನು ಒಳಗೊಂಡು ತಂಡದೊಂದಿಗೆ ಇನ್ನು ಎರಡು ವಾರದಲ್ಲಿ ಸಮಗ್ರ ತನಿಖೆ ಮಾಡಿ ಪರಿಹಾರ ಖಂಡಿತ ಕೊಡುತ್ತೇವೆ. ಕಂಪನಿಯ ನಿಯಮಗಳ ಉಲ್ಲಂಘನೆ, ಸಾರ್ವಜನಿಕ ರಸ್ತೆ ಮುಚ್ಚಿ, ಸರ್ಕಾರಿ ಕಟ್ಟೆ ಅತಿಕ್ರಮಿಸಿ ಕಲುಷಿತಗೊಳಿಸಿರುವ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ನೀಡುತ್ತೇವೆ ಎಂದು ಅಧಿಕಾರಿಗಳು ಸ್ಥಳದಲ್ಲಿದ್ದ ಶಾಸಕ ಎಚ್.ಟಿ.ಮಂಜು ಮತ್ತು ಸಾರ್ವಜನಿಕರಿಗೆ ಭರವಸೆ ನೀಡಿದರು.ಈ ವೇಳೆ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಸೇರಿದಂತೆ ಕೆ.ಐ.ಡಿ.ಬಿ ಅಧಿಕಾರಿಗಳು ರೈತರ ಅಹವಾಲುಗಳನ್ನು ಆಲಿಸಿದರು.

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ