ಮೆಗಾಸಿಟಿ ಕಂಪನಿ ಹೆಸರಿನಲ್ಲಿ ವಂಚನೆ ಪ್ರಕರಣ: ಕಾಂಗ್ರೆಸ್‌ ಶಾಸಕ ಸಿ.ಪಿ.ಯೋಗೇಶ್ವರ್‌ ಸೇರಿ 6 ಮಂದಿ ಖುಲಾಸೆ

KannadaprabhaNewsNetwork |  
Published : Nov 23, 2025, 02:30 AM IST

ಸಾರಾಂಶ

ಎಂಡಿಬಿಎಲ್‌ ಕಂಪನಿ ಹೆಸರಿನಲ್ಲಿ 1996-97- 2005-06ರ ಅವಧಿಯಲ್ಲಿ ವಜ್ರಗಿರಿ ವಸತಿ ಯೋಜನೆಯಡಿ ಕಂಪನಿ ಸದಸ್ಯರು/ ಸಾರ್ವಜನಿಕರಿಂದ ಕೋಟ್ಯಂತರ ರು. ಸಂಗ್ರಹಿಸಿದ್ದಾರೆ. ಬಳಿಕ ನಕಲಿ ಮಾರಾಟ ಪತ್ರಗಳನ್ನು ಸೃಷ್ಟಿಸಿ, ಭೂಮಿ ಖರೀದಿಸಿರುವುದಾಗಿ ಸುಳ್ಳು ದಾಖಲೆ ತೋರಿಸಿ ಸುಮಾರು 37.22 ಕೋಟಿ ರು. ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿತ್ತು.

ಬೆಂಗಳೂರು: ಮೆಗಾಸಿಟಿ(ಬೆಂಗಳೂರು) ಡೆವಲಪರ್ಸ್‌ ಆ್ಯಂಡ್‌ ಬಿಲ್ಡರ್ಸ್‌ ಪ್ರೈವೇಟ್‌ ಲಿಮಿಟೆಡ್‌(ಎಂಡಿಬಿಎಲ್‌) ಕಂಪನಿ ಹೆಸರಿನಲ್ಲಿ ವಜ್ರಗಿರಿ ವಸತಿ ಯೋಜನೆಯಡಿ ಸಾರ್ವಜನಿಕರಿಂದ ಕೋಟ್ಯಂತರ ರು. ಸಂಗ್ರಹಿಸಿ ವಂಚಿಸಿದ ಆರೋಪದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್‌ ಸೇರಿ ಆರು ಮಂದಿಯನ್ನು ಖುಲಾಸೆಗೊಳಿಸಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು, ಆರೋಪಿಗಳಾದ ಎಂಡಿಬಿಎಲ್‌ ಕಂಪನಿ ನಿರ್ದೇಶಕರಾದ ಸಿ.ಪಿ.ಯೋಗೇಶ್ವರ್‌, ಮಂಜು ಕುಮಾರಿ, ಸಿ.ಪಿ.ಗಂಗಾಧರೇಶ್ವರ, ಎಚ್‌.ಆರ್‌.ರಮೇಶ್‌, ಸಾಂಬಶಿವ ರಾವ್‌ ಹಾಗೂ ಎಂಡಿಬಿಎಲ್‌ ಕಂಪನಿಯನ್ನು ಖುಲಾಸೆಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಎಂಡಿಬಿಎಲ್‌ ಕಂಪನಿ ಹೆಸರಿನಲ್ಲಿ 1996-97- 2005-06ರ ಅವಧಿಯಲ್ಲಿ ವಜ್ರಗಿರಿ ವಸತಿ ಯೋಜನೆಯಡಿ ಕಂಪನಿ ಸದಸ್ಯರು/ ಸಾರ್ವಜನಿಕರಿಂದ ಕೋಟ್ಯಂತರ ರು. ಸಂಗ್ರಹಿಸಿದ್ದಾರೆ. ಬಳಿಕ ನಕಲಿ ಮಾರಾಟ ಪತ್ರಗಳನ್ನು ಸೃಷ್ಟಿಸಿ, ಭೂಮಿ ಖರೀದಿಸಿರುವುದಾಗಿ ಸುಳ್ಳು ದಾಖಲೆ ತೋರಿಸಿ ಸುಮಾರು 37.22 ಕೋಟಿ ರು. ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಆರೋಪಿಗಳು ಮೃತ ವ್ಯಕ್ತಿಗಳು, ಕಾಲ್ಪನಿಕ ವ್ಯಕ್ತಿಗಳು, ಖಾತೆದಾರರಲ್ಲದವರು, ಅಸ್ತಿತ್ವದಲ್ಲೇ ಇರದ ಸರ್ವೇ ನಂಬರ್‌ಗಳ ಹೆಸರಿನಲ್ಲಿ ನಕಲಿ ಮತ್ತು ಸುಳ್ಳು ಮಾರಾಟ ಒಪ್ಪಂದ ಮಾಡಿಕೊಂಡಿದ್ದಾರೆ. ಠೇವಣಿದಾರರಿಗೆ ಹಣ ವಾಪಸ್ ನೀಡದೇ ಹಾಗೂ ನಿವೇಶನವನ್ನೂ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕೇಂದ್ರ ಸರ್ಕಾರದ ಗಂಭೀರ ವಂಚನೆ ಪ್ರಕರಣಗಳ ತನಿಖಾ ಕಚೇರಿ (ಎಸ್‌‍ಎಫ್‌ಐಒ) ತನಿಖೆ ನಡೆಸಿತ್ತು. ಕೇಂದ್ರ ಅಪರಾಧ ವಿಭಾಗ(ಸಿಐಡಿ)ವು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳಾದ ಸಿ.ಪಿ.ಯೋಗೇಶ್ವರ್‌ ಸೇರಿ ಆರು ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ