ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ನಿರ್ಮಾಣ ಹಂತದಲ್ಲಿರುವ ಮೆಗಾ ಮಾರ್ಟ್ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ಮುದ್ದೇಬಿಹಾಳ ಪಟ್ಟಣ ಸುತ್ತಲಿನ ಗ್ರಾಮಗಳ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ವ್ಯಾಪಾರ ಮಳಿಗೆಗಳ ಕೊರತೆ, ವಾಹನ ನಿಲುಗಡೆ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಮೆಗಾ ಮಾರ್ಟ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲ:ಮೆಗಾಮಾರ್ಟ್ ನಿರ್ಮಾಣದಿಂದ ಪಟ್ಟಣದ ವ್ಯಾಪಾರ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯಾಪಾರಸ್ಥರಿಗೆ ಸುಸಜ್ಜಿತ ಸ್ಥಳದಲ್ಲಿ ವ್ಯಾಪಾರ ನಡೆಸಲು ಅವಕಾಶ ಸಿಗಲಿದೆ. ಇದರಿಂದ ಪಟ್ಟಣದ ವಾಣಿಜ್ಯ ಚಟುವಟಿಕೆಗಳು ಒಂದೆಡೆ ವ್ಯವಸ್ಥಿತಗೊಳ್ಳುವುದರ ಜೊತೆಗೆ ಗ್ರಾಹಕರಿಗೂ ವ್ಯಾಪಾರ ಚಟುವಟಿಕೆಗಳನ್ನು ಸುಲಭವಾಗಿ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೆತ್ತಿಕೊಂಡಿರುವ ಮೆಗಾಮಾರ್ಟ್ ಹಾಗೂ ಜಲಧಾರೆ ಯೋಜನೆಗಳ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಎರಡೂ ಯೋಜನೆಗಳ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಸಮರ್ಪಿಸುವ ಉದ್ದೇಶವಿದೆ. ಎರಡೂ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಯೋಜನೆಗಳನ್ನು ಉದ್ಘಾಟಿಸಲಾಗುವುದು ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ತಿಳಿಸಿದರು.
ಮುದ್ದೇಬಿಹಾಳ ಪಟ್ಟಣದ ಸಮಗ್ರ ಅಭಿವೃದ್ಧಿಯೇ ಪ್ರಮುಖ ಗುರಿ. ಜನತೆಗೆ ನೀಡಿರುವ ಭರವಸೆಯಂತೆ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುತ್ತಿದೆ. ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಮಾಜಿ ಅಧ್ಯಕ್ಷ ಮೆಹಬೂಬ ಗೊಳಸಂಗಿ, ನಗರಾಭಿವೃದ್ಧಿ ಇಲಾಖೆ ಎಇಇ ಜಗದೀಶ ನಾರಾಯಕರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಮುಖಂಡ ಸಂಗನಗೌಡ ಬಿರಾದಾರ(ಜಿಟಿಸಿ), ಪ್ರಭುರಾಜ ಕಲುಬುರ್ಗಿ, ಅಪ್ಪು ದೇಗಿನಾಳ, ನಿಂಗಪ್ಪ ಚೆಟ್ಟೇರ, ವೈ.ಎಚ್.ವಿಜಯಕರ, ಯಲ್ಲಪ್ಪ ಚಲವಾದಿ, ರಾಜು ರಾಠೋಡ, ಸಂತೋಷ ನಾಯ್ಕೋಡಿ ಸೇರಿ ಕಾಂಗ್ರೆಸ್ ಮುಖಂಡರು ಮೆಗಾ ಮಾರ್ಟ್ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿ ಪಡೆದರು.
ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ
ಬಾಕ್ಸ್
ಮೆಗಾಮಾರ್ಟ್ ಕಾಮಗಾರಿಗೆ ಈಗಾಗಲೇ ಎರಡು ಹಂತಗಳಲ್ಲಿ ತಲಾ ₹5 ಕೋಟಿಯಂತೆ ಒಟ್ಟು ₹10 ಕೋಟಿ ಮಂಜೂರಾಗಿದೆ. ಕಟ್ಟಡ ಪೂರ್ಣಗೊಳಿಸಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಇನ್ನೂ ಹೆಚ್ಚುವರಿಯಾಗಿ ₹5 ಕೋಟಿ ಅನುದಾನದ ಅಗತ್ಯವಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಾತನಾಡಿ ಹೆಚ್ಚುವರಿ ಅನುದಾನ ಮಂಜೂರು ಮಾಡಿಸಿಕೊಳ್ಳಲಾಗುವುದು ಎಂದು ಶಾಸಕ ನಾಡಗೌಡ ಭರವಸೆ ನೀಡಿದರು. ಮೆಗಾ ಮಾರ್ಟ್ ಮಳಿಗೆಗಳ ಹಂಚಿಕೆಯಲ್ಲಿ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ, ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಿ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ಒದಗಿಸಲಾಗುವುದು ಎಂದರು.