ಮೇಕೆದಾಟು ಡ್ಯಾಂಗೆ ಬೇಕಿದೆ 5000 ಹೆಕ್ಟೇರ್‌ ಭೂಮಿ

KannadaprabhaNewsNetwork |  
Published : Nov 14, 2025, 02:00 AM IST
13ಕೆಆರ್ ಎಂಎನ್ 2.ಜೆಪಿಜಿಮೇಕೆದಾಟು  | Kannada Prabha

ಸಾರಾಂಶ

ಮೇಕೆದಾಟು ಡ್ಯಾಂಗೆ ಬೇಕಿದೆ 5000 ಹೆಕ್ಟೇರ್‌ ಭೂಮಿ.

-ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಬಳಿ ಕಾವೇರಿ ನದಿಗೆ ಸಮತೋಲನ ಜಲಾಶಯ ನಿರ್ಮಿಸುವ ಕರ್ನಾಟಕ ಸರ್ಕಾರದ ನಿರ್ಧಾರ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವುದು ಮೇಕೆದಾಟು ಯೋಜನೆಗೆ ಮರುಜೀವ ಬಂದಂತಾಗಿದೆ.ಏನಿದು ಯೋಜನೆ?:

ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗುವ ಈ ಯೋಜನೆಗೆ ಈಗಾಗಲೇ ಸ್ಥಳವನ್ನೂ ಗುರುತಿಸಲಾಗಿದೆ. ವಿನಾಕಾರಣ ಸಮುದ್ರದ ಪಾಲಾಗಲಿರುವ ನೀರನ್ನು ಯೋಜಿತ ಅಣೆಕಟ್ಟೆಯಲ್ಲಿ ಸಂಗ್ರಹಿಸಿಟ್ಟುಕೊಂಡು ವಿದ್ಯುತ್ ಉತ್ಪಾದನೆ, ಬಯಲುಸೀಮೆ ಜಿಲ್ಲೆಗಳು ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶವನ್ನು ಹೊಂದಲಾಗಿದೆ.

ಈ ಯೋಜನೆಯನ್ನು ಕಾವೇರಿ ನ್ಯಾಯಾಧಿಕರಣದ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನ ಪರಿಮಿತಿಯಲ್ಲೇ ರೂಪಿಸಲಾಗಿದೆ. ಒಂಟಿ ಕುಡ್ಲು ಅರಣ್ಯ ಪ್ರದೇಶದಲ್ಲಿ ಮೇಕೆದಾಟು ಡ್ಯಾಂ ನಿರ್ಮಾಣಗೊಳ್ಳಲಿದೆ. ಇಲ್ಲಿಂದ ಸಂಗಮ 3 ಕಿ.ಮೀ. ದೂರದಲ್ಲಿದ್ದರೆ, 1.5 ಕಿ.ಮೀ. ದೂರದಲ್ಲಿ ಮೇಕೆದಾಟು ಇದೆ. ಮೇಕೆದಾಟಿನಿಂದ 2 ಕಿ.ಮೀ. ದೂರದಲ್ಲಿ ತಮಿಳುನಾಡು ಗಡಿ ಪ್ರಾರಂಭಗೊಳ್ಳಲಿದೆ.

ಮೇಕೆದಾಟು ತಳಮಟ್ಟದಲ್ಲಿ 352 ಮೀಟರ್, ತುಂಬಿ ಹರಿಯುವಾಗ 440 ಮೀಟರ್ ಹಾಗೂ ಅತಿ ಹೆಚ್ಚಿನದಾಗಿ 441 ಮೀಟರ್ ನೀರಿನ ಹರಿವನ್ನು ಶೇಖರಿಸುವಷ್ಟು ಸಾಮರ್ಥ್ಯವನ್ನು ಈ ಡ್ಯಾಂ ಹೊಂದಿರಲಿದೆ. ಈ ಡ್ಯಾಂ 674.5 ಮೀ. ಅಗಲ, 99 ಮೀ. ಎತ್ತರ ಇರಲಿದೆ. 17 ಗೇಟ್‌ಗಳನ್ನು ಹೊಂದಿರಲಿದೆ. ಪ್ರಸಕ್ತ ಯೋಜನೆಯಿಂದ ಕರ್ನಾಟಕವು 440 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲು ಸಹಕಾರಿ ಆಗಲಿದೆ.

(ಬಾಕ್ಸ್)

ಪರ್ಯಾಯ ಭೂಮಿ ಹಂಚಿಕೆ:

ಬಹು ನಿರೀಕ್ಷಿತ ಮೇಕೆದಾಟು ಅಣೆಕಟ್ಟೆ ನಿರ್ಮಾಣದಿಂದ ಸಾವಿರಾರು ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶ ಮುಳುಗಡೆ ಆಗಲಿದ್ದು, ಅದಕ್ಕೆ ಪ್ರತಿಯಾಗಿ ಅಷ್ಟೇ ಪ್ರಮಾಣದ ಅರಣ್ಯ ಬೆಳೆಸಲು ಸಿದ್ಧತೆ ನಡೆದಿದೆ.

ಜಿಲ್ಲೆಯಲ್ಲಿರುವ ಸಂಗಮ–ಮೇಕೆದಾಟು ಪ್ರದೇಶದಲ್ಲಿ ಕಾವೇರಿ ನದಿಗೆ 9000 ಕೋಟಿ ರು. ವೆಚ್ಚದಲ್ಲಿ ಅಣೆಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಡ್ಯಾಂಗಾಗಿ ಸುಮಾರು 4,996 ಹೆಕ್ಟೇರ್‌ ಪ್ರದೇಶ ಮುಳುಗಡೆ ಆಗಲಿದ್ದು, ಇದರಲ್ಲಿ 4716 ಹೆಕ್ಟೇರ್‌ ಅರಣ್ಯ ಪ್ರದೇಶವೇ ಆಗಿದೆ. ಅದರಲ್ಲಿಯೂ 2,800 ಹೆಕ್ಟೇರ್‌ನಷ್ಟು ಪ್ರದೇಶವು ಕಾವೇರಿ ವನ್ಯಧಾಮಕ್ಕೆ ಸೇರಿದೆ.

ಮುಳುಗಡೆ ಆಗಲಿರುವ ಶೇ.95ಕ್ಕೂ ಹೆಚ್ಚು ಜಮೀನು ಅರಣ್ಯವೇ ಆಗಿರುವ ಕಾರಣ ಯೋಜನೆಗೆ ಅನುಮತಿ ದೊರೆಯುವುದು ವಿಳಂಬ ಆಗುತ್ತಿದೆ. ಕನಕಪುರ ತಾಲೂಕಿನಲ್ಲಿ ಸುಮಾರು 2,500 ಹೆಕ್ಟೇರ್‌, ಮಂಡ್ಯ ಜಿಲ್ಲೆಯ ಮುತ್ತತ್ತಿ ಅರಣ್ಯ ಪ್ರದೇಶ ಹಾಗೂ ಚಾಮರಾಜನಗರದ ಹನೂರು ಅರಣ್ಯ ವಲಯದಲ್ಲಿ 2,200 ಹೆಕ್ಟೇರ್‌ನಷ್ಟು ಕಾಡು ಮುಳುಗಡೆ ಆಗಲಿದೆ.

===ಇದಕ್ಕೆ ಪ್ರತಿಯಾಗಿ ರಾಮನಗರ ಜಿಲ್ಲೆಯಲ್ಲಿ 2,500 ಹೆಕ್ಟೇರ್‌ನಷ್ಟು ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತವು ಅರಣ್ಯ ಇಲಾಖೆಗೆ ಹಸ್ತಾಂತರಿಸಲಿದೆ. ಈಗಾಗಲೇ ಇದಕ್ಕಾಗಿ 30 ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ.

ಯೋಜನೆಯ ವ್ಯಾಪ್ತಿಗೆ ಒಳಪಡುವ ಇತರ ಜಿಲ್ಲೆಗಳಾದ ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯಲ್ಲೂ ಇದೇ ಮಾದರಿಯಲ್ಲಿ ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಮುಳುಗಡೆ ಆಗುವಷ್ಟೇ ವಿಸ್ತೀರ್ಣದ ಜಮೀನನ್ನು ಪ್ರತಿಯಾಗಿ ಬಿಟ್ಟುಕೊಡಬೇಕಿದೆ. ಹೀಗೆ ಪಡೆದುಕೊಂಡ ಭೂಮಿಯಲ್ಲಿ ಕಾಡು ಬೆಳೆಸುವ ಯೋಜನೆಯನ್ನು ಇಲಾಖೆ ಮಾಡಲಿದೆ. ಮಂಡ್ಯದಲ್ಲಿ 2 ಸಾವಿರ ಹಾಗೂ ಚಾಮರಾಜನಗರದಲ್ಲಿ 1 ಸಾವಿರ ಹೆಕ್ಟೇರ್‌ ಭೂಮಿ ಅರಣ್ಯ ಇಲಾಖೆಗೆ ಸಿಗುವ ನಿರೀಕ್ಷೆ ಇದೆ.(ಬಾಕ್ಸ್):

ಮೇಕೆದಾಟು ಅಣೆಕಟ್ಟು ವಿವರ:

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ತಗಲುವ ವೆಚ್ಚ - 9 ಸಾವಿರ ಕೋಟಿ.

ಅಣೆಕಟ್ಟೆ ಎತ್ತರ - 441.2 ಮೀಟರ್.

ನೀರಿನ ಸಂಗ್ರಹ - 66.5 ಟಿಎಂಸಿ.

ಡೆಡ್ ಸ್ಟೋರೆಜ್ - 7.7 ಟಿಎಂಸಿ.

ವಿದ್ಯುತ್ ಉತ್ಪಾದನೆ - 400 ಮೆಗಾ ವ್ಯಾಟ್.

PREV

Recommended Stories

ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ
ಹಾರನ್‌ ಮಾಡಿದ್ದಕ್ಕೆ ಸಿಟ್ಟಿಗೆದ್ದು ಬೈಕ್‌ಗೆ ಕಾರು ಗುದ್ದಿಸಿದವ ಸೆರೆ