ಕೇವಲ ಒಂದು ವರ್ಷದ ಹಿಂದೆ ಪ್ರಸಿದ್ಧ ಕಲಾವಿದರೊಂದಿಗೆ ಬಯಲಾಟ ಮೇಳವಾಗಿ ಆರಂಭಗೊಂಡ ಮೆಕ್ಕೆಕಟ್ಟು ಮೇಳ ಭಾರಿ ಜನಪ್ರಿಯತೆ ಪಡೆದ ಹಿನ್ನೆಲೆ ಈ ಬಾರಿ ಡೇರೆ ಮೇಳವಾಗಿ ತಿರುಗಾಟ ಆರಂಭಿಸಿದೆ.
ವಸಂತಕುಮಾರ್ ಕತಗಾಲ
ಕಾರವಾರ: ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಮೆಕ್ಕೆಕಟ್ಟು ಮೇಳ ಡೇರೆ ಮೇಳವಾಗಿ ಪರಿವರ್ತನೆಗೊಳ್ಳುವುದರೊಂದಿಗೆ ಬಡಗಿನಲ್ಲಿ ಮೂರನೇ ಡೇರೆ ಮೇಳ ಉದಯವಾದಂತಾಗಿದೆ. ಕೇವಲ ಒಂದು ವರ್ಷದ ಹಿಂದೆ ಪ್ರಸಿದ್ಧ ಕಲಾವಿದರೊಂದಿಗೆ ಬಯಲಾಟ ಮೇಳವಾಗಿ ಆರಂಭಗೊಂಡ ಮೆಕ್ಕೆಕಟ್ಟು ಮೇಳ ಭಾರಿ ಜನಪ್ರಿಯತೆ ಪಡೆದ ಹಿನ್ನೆಲೆ ಈ ಬಾರಿ ಡೇರೆ ಮೇಳವಾಗಿ ತಿರುಗಾಟ ಆರಂಭಿಸಿದೆ. ಈ ಬಾರಿಯೂ ಪ್ರಸಿದ್ಧ ಕಲಾವಿದರು ಮೆಕ್ಕೆಕಟ್ಟು ಮೇಳದಲ್ಲಿದ್ದಾರೆ. ಜಲವಳ್ಳಿ ವಿದ್ಯಾಧರ ರಾವ್, ನೀಲ್ಕೋಡ ಶಂಕರ ಹೆಗಡೆ, ರಮೇಶ ಭಂಡಾರಿ ಮೂರೂರು, ಶಂಕರ ಭಟ್ ಬ್ರಹ್ಮೂರು, ರಾಜೇಶ ಭಂಡಾರಿ, ನಾಗರಾಜ ಭಂಡಾರಿ, ಸುಬ್ರಹ್ಮಣ್ಯ ಮೂರೂರು(ಮದ್ದಲೆ) ಹೀಗೆ ಉತ್ತರ ಕನ್ನಡದವರೇ ಪ್ರಮುಖ ಕಲಾವಿದರಾಗಿರುವ ಈ ಮೇಳ ನ. 20ರಿಂದ ಡೇರೆ ಮೇಳವಾಗಿ ತಿರುಗಾಟ ಆರಂಭಿಸಿದೆ. ಸಾಲಿಗ್ರಾಮ ಹಾಗೂ ಪೆರ್ಡೂರು ಈ ಎರಡು ಡೇರೆ ಮೇಳಗಳು ಬಡಗಿನಲ್ಲಿ 4- 5 ದಶಕಗಳಿಂದ ಇವೆ. ಈ ನಡುವೆ ಹುಟ್ಟಿಕೊಂಡ ಕೆಲ ಡೇರೆ ಮೇಳಗಳನ್ನು ನಡೆಸಲಾಗದೆ ಬಂದ್ ಆದ ಉದಾಹರಣೆಗಳೂ ಇವೆ. ಕಳೆದ ವರ್ಷವಷ್ಟೇ ಬಯಲಾಟ ಮೇಳವಾಗಿ ಮೆಕ್ಕೆಕಟ್ಟು ಮೇಳ ತಿರುಗಾಟ ಆರಂಭಿಸಿತ್ತು.
ಮೆಕ್ಕೆಕಟ್ಟು ಮೇಳಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಚಳಿಗಾಲದಲ್ಲಿ ತೀವ್ರ ಚಳಿ ಇರುವುದರಿಂದ ಡೇರೆ ಅಳವಡಿಸಿಕೊಂಡಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮೆಕ್ಕೆಕಟ್ಟು ಮೇಳ ಡೇರೆ ಮೇಳವಾಗಿ ಪರಿವರ್ತನೆಗೊಂಡಿದೆ. ಸಂಘಟಕರ ಕೋರಿಕೆ ಇದ್ದಲ್ಲಿ ಬಯಲಾಟ ಪ್ರದರ್ಶನವನ್ನೂ ಮೇಳ ನೀಡಲಿದೆ. ಡಿಸೆಂಬರ್ ಹಾಗೂ ಜನವರಿ ತಿಂಗಳುಗಳಲ್ಲಿ ಕೊರೆಯುವ ಚಳಿಯಲ್ಲಿ ಬಯಲಾಟ ನೋಡುವುದು ಕಷ್ಟ. ಡೇರೆಯಲ್ಲಿ ಬೆಚ್ಚಗೆ ಕುಳಿತು ಯಕ್ಷಗಾನ ನೋಡಬಹುದಾಗಿದೆ. ಸಾಲಿಗ್ರಾಮ, ಪೆರ್ಡೂರು ಮೇಳಗಳ ಜತೆಗೆ ಮೂರನೇ ಡೇರೆ ಮೇಳವಾಗಿ ಮೆಕ್ಕೆಕಟ್ಟು ಮೇಳ ಯಕ್ಷಪ್ರಿಯರಿಗೆ ರಸದೌತಣ ನೀಡಲಿದೆ.
ಉತ್ತಮ ಪ್ರತಿಕ್ರಿಯೆ: ನಮ್ಮ ಮೇಳದಲ್ಲಿ ಜರ್ಮನ್ ಟೆಂಟ್ ರೀತಿಯಲ್ಲಿನ ಡೇರೆ ರೂಪಿಸಲಾಗಿದೆ. ಎಲ್ಲೂ ಹೊಂಡ ತೆಗೆಯದೆ ಡೇರೆ ಹಾಕಲಾಗುತ್ತದೆ. ಡೇರೆಗೆ 8 ಲಕ್ಷ ರು. ವೆಚ್ಚವಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಘಟಕರ ಅನುಕೂಲಕ್ಕೆ ತಕ್ಕಂತೆ ನಮ್ಮ ಮೇಳ ಯಕ್ಷಗಾನ ಪ್ರದರ್ಶನ ನೀಡುತ್ತಿದೆ ಎಂದು ಮೇಳದ ಸಂಚಾಲಕರಾದ ರಂಜಿತ ಶೆಟ್ಟಿ ವಕ್ವಾಡಿ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.