ಕನ್ನಡಪ್ರಭ ವಾರ್ತೆ ಮೇಲುಕೋಟೆ
ವಾರ್ಷಿಕ ಮೂರು ಬ್ರಹ್ಮೋತ್ಸವಗಳ ಪೈಕಿ ರಾಜಮುಡಿ ಜಾತ್ರೆ ಕಾರ್ತಿಕ ಮಾಸದಲ್ಲಿ ನಡೆಯಲಿದೆ. ವರ್ಷದ ಕೊನೆಗೆ ಬ್ರಹ್ಮೋತ್ಸವವಾಗಿದೆ. ಜಾತ್ರಾ ಮಹೋತ್ಸವದ ನಾಲ್ಕನೇ ತಿರುನಾಳ್ ದಿನವಾದ ಮಂಗಳವಾರ ರಾತ್ರಿ 7 ಗಂಟೆಗೆ ಮೈಸೂರು ಸಂಸ್ಥಾನದ ದೊರೆ ರಾಜ ಒಡೆಯರ್ ಸಮರ್ಪಿಸಿರುವ ಅಮೂಲ್ಯ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟ, ಗಂಡುಬೇರುಂಡ ಪದಕ ಸೇರಿದಂತೆ 16 ಬಗೆಯ ವಜ್ರಾಭರಣಗಳಿಂದ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಿ ಉತ್ಸವ ನೆರವೇರಿಸುವುದು ರಾಜಮುಡಿ ಉತ್ಸವದ ವಿಶೇಷವಾಗಿದೆ.
ನ.22ರಂದು ರಾಜಮುಡಿ ಬ್ರಹ್ಮೋತ್ಸವದ ಕೊನೆ ಕಾರ್ಯಕ್ರಮ ತೀರ್ಥಸ್ನಾನ ಮಹೋತ್ಸವ ಕಲ್ಯಾಣಿಯಲ್ಲಿ ನಡೆಯಲಿದೆ. ಮಹಾರಾಜರೇ ಕೊಡುಗೆ ನೀಡಿದ ವಜ್ರಖಚಿತ ಅಲಂಕಾರದೊಂದಿಗೆ ಜಾತ್ರಾ ಮಹೋತ್ಸವದ ಉತ್ಸವಗಳು ಶಾಸ್ತ್ರೋಕ್ತವಾಗಿ ಲೋಕಕಲ್ಯಾಣಕ್ಕಾಗಿ ನಡೆದರೂ ಸಹ ಬ್ರಹ್ಮೋತ್ಸವದ ಎಲ್ಲಾ ಪ್ರಮುಖ ಉತ್ಸವಗಳೂ ಕೇವಲ ಸಾಂಕೇತಿಕವಾಗಿ ಬೆರಳೆಣಿಕೆಯ ಭಕ್ತರ ನಡುವೆ ನಡೆಯುತ್ತಿರುವುದು ವಿಪರ್ಯಾಸವಾಗಿದೆ.ನ.17ರಂದು ನಡೆಯುವ ರಾಜಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಪ್ರತಿವರ್ಷಕ್ಕಿಂತ ಭಿನ್ನವಾಗಿ ವಿಶೇಷ ತೋಮಾಲೆ ಮತ್ತು ಮಂಗಳವಾದ್ಯ ವ್ಯವಸ್ಥೆಮಾಡಿ ಉತ್ಸವ ನಡೆಸಲಾಗುತ್ತಿದೆ. ಅದೇ ದಿನ ತಮಿಳುನಾಡಿನ ಸರ್ಕಾರದ ವಿಶೇಷ ಆದೇಶದನ್ವಯ ರಾಮಾನುಜಾಚಾರ್ಯರ ಗುರುಗಳಾದ ಎಂಬಾರ್ ದೇವಾಲಯದಿಂದ ಚೆಲುವನಾರಾಯಣಸ್ವಾಮಿ ಮತ್ತು ರಾಮಾನು ಜಾಚಾರ್ಯರಿಗೆ ವಿಶೇಷ ಗೌರವಾರ್ಪಣೆ ಮಾಡಲಾಗುತ್ತಿದೆ. ಹಿರಿಯ ಅಧಿಕಾರಿಗಳು ಅರ್ಚಕರು ಭಾಗವಹಿಸಲಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ಭಕ್ತರಿಗೆ ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿ ತೊಟ್ಟಿಲಮುಡು ಜಾತ್ರೆಯೆಂದೇ ಪ್ರಖ್ಯಾತವಾಗಿರುವ ಅಷ್ಠತೀರ್ಥೋತ್ಸವ ನ.19 ರಂದು ನಡೆಯಲಿದೆ. ಬಹುಕಾಲದಿಂದ ಮಕ್ಕಳಿಲ್ಲದ ದಂಪತಿಗಳು, ಚೆಲುವನಾರಾಯಣನಂತಾ ಮುದ್ದಾದ ಪುತ್ರಭಾಗ್ಯ ಅಪೇಕ್ಷಿಸುವ ಯುವ ದಂಪತಿಗಳು ಹರಕೆ ಕಟ್ಟಿಕೊಂಡು ಅಷ್ಠತೀರ್ಥದಲ್ಲಿ ಭಾಗಿಯಾಗುವುದು ವಿಶೇಷವಾಗಿದೆ. ವೈದ್ಯರು ಕೈಚೆಲ್ಲಿದ ಎಷ್ಟೋ ಪ್ರಕರಣಗಳಲ್ಲಿ ಭಕ್ತರ ಇಷ್ಠಾರ್ಥ ನೆರವೇರಿರುವ ಕಾರಣ ಹರಕೆ ಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ. ಬೆಳಗ್ಗೆ 9 ಗಂಟೆಗೆ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ಕಲ್ಯಾಣಿಗೆ ನೆರವೇರಿದ ವೇಳೆ ಪಾದುಕೆಗೆ ಪ್ರಥಮ ಅಭಿಷೇಕ ನಡೆಯುತ್ತದೆ. ನಂತರ ಯದುಗಿರಿಯ ಬೆಟ್ಟಗುಡ್ಡಗಳ ಮದ್ಯೆ ಇರುವ ಎಂಟು ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕ ನಡೆದ ನಂತರ ಸಂಜೆ ವೇಳೆಗೆ ವೈಕುಂಠಗಂಗೆಯಲ್ಲಿ ಕೊನೆ ಅಭಿಷೇಕ ನೆರವೇರುತ್ತದೆ. ಇದೇ ವೇಳೆ ನಡೆಯುವ ತೊಟ್ಟಿಲಮಡು ಜಾತ್ರೆಯಲ್ಲಿ ಇಡೀ ಬಂಡೆಗಳು ಮರಗಳು ಹಾಗೂ ಮಂಟಪಗಳಿಗೆ ಈ ವರ್ಷ ವ್ಯವಸ್ಥಾಪನಾ ಸಮಿತಿ ವಿಶೇಷ ದೀಪಾಲಂಕಾರ ಮಾಡುವುದಾಗಿ ಮತ್ತು ಸುಗಮಸಂಗೀತ ಏರ್ಪಡಿಸುವುದಾಗಿ ತಿಳಿಸಿದೆ.