ಕನ್ನಡಪ್ರಭ ವಾರ್ತೆ ಹಾಸನನಗರದ ಹೊಸಲೈನ್ ರಸ್ತೆ, ಈದ್ಗಾ ಮೈದಾನದ ಎದುರಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ಸ್ನಾತಕೋತ್ತರ ವಿದ್ಯಾರ್ಥಿನಿಲಯದಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ನಿರ್ವಹಣಾ ಅವ್ಯವಸ್ಥೆ ಖಂಡಿಸಿ ಶನಿವಾರ ಸಂಜೆ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಶರತ್ ಮತ್ತು ಮಾನವ ಹಕ್ಕುಗಳ ಅಧ್ಯಕ್ಷೆ ಹಾಗೂ ರೈತ ಸಂಘದ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷೆ ತಾರಾವತಿ ಹರೀಶ್ ಮಾತನಾಡಿ, ಹಾಸ್ಟೆಲ್‌ಗೆ ವಾರ್ಡನ್ ನೇಮಕಗೊಂಡ ದಿನದಿಂದಲೂ ಸಮಸ್ಯೆಗಳು ಹೆಚ್ಚಾಗಿದ್ದು, ವಾರ್ಡನ್ ಸಮರ್ಪಕವಾಗಿ ಹಾಸ್ಟೆಲ್‌ಗೆ ಭೇಟಿ ನೀಡುವುದಿಲ್ಲ. ಯಾವುದೇ ಸಮಸ್ಯೆ ಹೇಳಿಕೊಂಡರೂ ಸಂಬಂಧಪಟ್ಟವರನ್ನು ಸಂಪರ್ಕಿಸುವಂತೆ ಸೂಚಿಸುತ್ತಾರೆ. ವಾರ್ಡನ್, ಹಾಸ್ಟೆಲ್ ಕಟ್ಟಡದ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ ಎಂದು ದೂರಿದರು. ಹಾಸ್ಟೆಲ್‌ನಲ್ಲಿ ಸುಮಾರು ೧೦೦ರಿಂದ ೧೨೦ ವಿದ್ಯಾರ್ಥಿಗಳಿದ್ದು, ಸ್ನಾನಕ್ಕೆ ಒಂದೇ ಒಂದು ಗೀಸರ್ ವ್ಯವಸ್ಥೆ ಇದೆ. ಸೋಲಾರ್ ನೀರಿನ ವ್ಯವಸ್ಥೆಯೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಲವು ಕೊಠಡಿಗಳಲ್ಲಿ ಫ್ಯಾನ್‌ಗಳಿಲ್ಲ. ವಿದ್ಯುತ್ ಸ್ವಿಚ್‌ಗಳು ಮತ್ತು ವೈರ್‌ಗಳನ್ನು ಅಸುರಕ್ಷಿತವಾಗಿ ಬಿಡಲಾಗಿದೆ. ತಿಗಣೆಗಳ ಕಾಟವೂ ಹೆಚ್ಚಾಗಿದೆ ಎಂದು ಆರೋಪಿಸಿದರು. ಊಟದ ಗುಣಮಟ್ಟ ಸಮರ್ಪಕವಾಗಿಲ್ಲ. ಕೆಲವೊಮ್ಮೆ ಆಹಾರದ ಕೊರತೆ ಉಂಟಾಗುತ್ತಿದ್ದು, ಆಹಾರದಲ್ಲಿ ಕೀಟಗಳು ಹಾಗೂ ಇತರ ಅಶುದ್ಧ ವಸ್ತುಗಳು ಕಂಡುಬಂದಿರುವ ಘಟನೆಗಳೂ ನಡೆದಿವೆ. ಕುಡಿಯುವ ನೀರು ಮತ್ತು ಅಡುಗೆಗೆ ಬಳಸುವ ನೀರಿನ ಸ್ವಚ್ಛತೆಯ ಬಗ್ಗೆಯೂ ಅನುಮಾನಗಳಿವೆ. ನೀರಿನ ಟ್ಯಾಂಕ್‌ಗಳಲ್ಲಿ ಪಾಚಿ ಕಟ್ಟಿಕೊಂಡಿದ್ದು, ಅವುಗಳನ್ನು ಸ್ವಚ್ಛಗೊಳಿಸದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಚಪ್ಪಲಿ ಸ್ಟ್ಯಾಂಡ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಲ್ಲ. ಸಮಸ್ಯೆಗಳನ್ನು ತಿಳಿಸಲು ವಾಟ್ಸ್‌ಆಪ್ ಗ್ರೂಪ್ ರಚಿಸಿ ವಾರ್ಡನ್ ಅವರನ್ನೂ ಸೇರಿಸಿದ್ದರೂ ಯಾವುದೇ ಸ್ಪಷ್ಟ ಪರಿಹಾರ ದೊರೆತಿಲ್ಲ. ಮೂರು ವರ್ಷಗಳಿಂದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರೂ ಭರವಸೆ ನೀಡುವುದನ್ನು ಬಿಟ್ಟರೆ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ದೂರಿದರು. ಹಾಸ್ಟೆಲ್‌ನ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಾರ್ಡನ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದರ ಜೊತೆಗೆ ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.ಈ ವೇಳೆ ಹಾಸ್ಟೆಲ್ ವಿದ್ಯಾರ್ಥಿಗಳಾದ ಮಲ್ಲ, ದೀಪಕ್, ಕೌಶಿಕ್, ಕುಶಾಲ್ ಶಿವಕುಮಾರ್ ಇತರರು ಉಪಸ್ಥಿತರಿದ್ದರು.