ಕನ್ನಡಪ್ರಭ ವಾರ್ತೆ ಮೇಲುಕೋಟೆ/ಪಾಂಡವಪುರ
ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದ ಸಚಿವರು ನಂತರ ಮಧ್ಯಾಹ್ನ ಕಲ್ಯಾಣಿ ಬಳಿ ಎರಡು ಕೋಟಿರ ರು. ವೆಚ್ಚದಲ್ಲಿ ನಿರ್ಮಿಸಿರುವ ಅನ್ನದಾನ ಭವನದಲ್ಲಿ ಪ್ರಸಾದ ವಿತರಣೆಗೆ ಚಾಲನೆ ನೀಡಿದರು. ನಂತರ ಮೇಲುಕೋಟೆ ಪರಂಪರೆಯಂತೆ ಸಿದ್ಧಪಡಿಸಿದ್ದ ಸಕ್ಕರೆ ಪೊಂಗಲ್, ಪುಳಿಯೋಗರೆ ಮೊಸರನ್ನವನ್ನು ಭಕ್ತರಿಗೆ ಬಡಿಸಿದರು. ಬಳಿಕ ಸಚಿವ ಚಲುವರಾಯಸ್ವಾಮಿ ದಂಪತಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಭಕ್ತರಜೊತೆ ಕುಳಿತು ಪ್ರಸಾದ ಸ್ವೀಕರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಶನಿವಾರ, ಭಾನುವಾರ ರಜಾದಿನಗಳಂದು ಅನ್ನದಾನ ಮಾಡಲಾಗುತ್ತದೆ. ನಂತರ ದಿನಗಳಲ್ಲಿ ನಿತ್ಯ ಅನ್ನದಾನ ಆರಂಭಿಸಲಾಗುತ್ತದೆ. ಭಕ್ತರು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಕೆಮಾಡಿಕೊಳ್ಳಬೇಕು ಎಂದರು.ಮೇಲುಕೋಟೆಗೆ ರಾಜ್ಯದ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅನ್ನ ಪ್ರಸಾದ ಭವನದಲ್ಲಿ ಭಕ್ತರಿಗೆ ಅನ್ನ ಪ್ರಸಾದ ವಿತರಣೆ ಮಾಡುವ ಕಾರ್‍ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಸ್ಥಳೀಯ ಸಂಪನ್ಮೂಲ ಇಂತಿಷ್ಟು ಸಂಗ್ರಹವಾಗಬೇಕು ಎಂಬ ನಿಯಮವಿದೆ. ಈ ಬಗ್ಗೆ ಶಾಸಕರು ಹಾಗೂ ನಾನು ಸಹ ಸರ್ಕಾರದೊಂದಿಗೆ ಚರ್ಚಿಸಿ ಅಭಿವೃದ್ಧಿ ಪ್ರಾಧಿಕಾರ ಮಾಡಲು ಕ್ರಮ ವಹಿಸಲಾಗುವುದು, ಜತೆಗೆ ಮೇಲುಕೋಟೆ ಅಭಿವೃದ್ಧಿಗೂ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಸಂತೋಷ್, ತಾಪಂ ಇಒ ಲೋಕೇಶ್, ಕೆಪಿಸಿಸಿ ಸದಸ್ಯ ತ್ಯಾಗರಾಜು, ಕಾಡೇನಹಳ್ಳಿ ರಾಮಚಂದ್ರು, ದೇವಾಲಯದ ಇಒ ಶೀಲಾ, ಗ್ರಾಪಂ ಸದಸ್ಯೆ ಭಾಗ್ಯ, ಡೇರಿ ಅಧ್ಯಕ್ಷ ಜಯರಾಮೇಗೌಡ , ರಾಘು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.