ಮೇಲುಕೋಟೆಯ ಶತಮಾನದ ಸರ್ಕಾರಿ ಶಾಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆಯಂತೆ ಈ ವರ್ಷದಿಂದಲೇ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಿ 8ನೇ ತರಗತಿ ಆರಂಭಿಸುವಂತೆ ಒತ್ತಾಯಿಸಿ ಪಾದಯಾತ್ರೆ ಭಾಗವಹಿಸಿದ್ದ ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆಯ ಶತಮಾನದ ಸರ್ಕಾರಿ ಶಾಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆಯಂತೆ ಈ ವರ್ಷದಿಂದಲೇ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡಿಸಿ 8ನೇ ತರಗತಿ ಆರಂಭಿಸುವಂತೆ ಒತ್ತಾಯಿಸಿ ಪಾದಯಾತ್ರೆ ಭಾಗವಹಿಸಿದ್ದ ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಬಾಲಕರ ಶಾಲೆ ಗೇಟ್ ಎದುರು ಸರ್ಕಾರಿ ಪ್ರೌಢಶಾಲೆ ಬೇಕು ಎಂದು ಘೋಷಣೆ ಕೂಗಿ ಪ್ರತಿಭಟಿಸಿ, ಹೋಬಳಿ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಮಕ್ಕಳು ಪ್ರೌಢಶಾಲಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ದೂರದ ಊರಿಗೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಹೋಗಿ ಬರುತ್ತಿದ್ದಾರೆ. ಹೆಣ್ಣುಮಕ್ಕಳ ಪ್ರಯಾಸವಂತೂ ಹೇಳತೀರದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಶೈಕ್ಷಣಿಕ ವರ್ಷದಿಂದಲೇ 8ನೇ ತರಗತಿಗೆ ಮಕ್ಕಳನ್ನು ದಾಖಲಿಸಿಕೊಂಡು ಶಾಲೆ ಉನ್ನತೀಕರಿಸದಿದ್ದರೆ ಮಂಡ್ಯ ಬಿಇಒ ಕಚೇರಿಗೆ ಬೀಗಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೋಬಳಿ ವ್ಯಾಪ್ತಿಯ ಸುತ್ತಮುತ್ತಲಿ ಹತ್ತಾರು ಹಳ್ಳಿಗಳ ಹೆಣ್ಣುಮಕ್ಕಳು ಶಾಲೆಯನ್ನೇ ತೊರೆಯುವಂತಾಗಿದೆ. ಸರ್ಕಾರದ ಶಿಕ್ಷಣ ನೀತಿಯಂತೆಯೇ ಶತಮಾನದ ಶಾಲೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಬೇಕು. 8ನೇ ತರಗತಿ ಆರಂಭಿಸಿ ಹಂತ ಹಂತವಾಗಿ 9 ಮತ್ತು 10ನೇ ತರಗತಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿಗೌಡ ಮಾತನಾಡಿ, ಒಂದು ವರ್ಷದಹಿಂದೆಯೇ ಮೇಲುಕೋಟೆಯಲ್ಲಿದ್ದ ಅನುದಾನಿತ ಪ್ರೌಢಶಾಲೆ ಮುಚ್ಚಿಹೋಗಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ನಮಗೆ ಸರ್ಕಾರಿ ಪ್ರೌಢಶಾಲೆ ಬೇಕಿದೆ ಎಂದರು.
2025ರ ಮೇ ನಲ್ಲೇ ಶಾಸಕರು ಮೇಲುಕೋಟೆಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸಲು ಪತ್ರ ಬರೆದಿದ್ದಾರೆ. ಶಿಕ್ಷಣ ಇಲಾಖೆ ಆಯುಕ್ತರೂ ಸಹ ಮಂಡ್ಯ ಉಪನಿರ್ದೇಶಕರಿಗೆ ಸ್ಪಷ್ಟ ಪ್ರಸ್ತಾವನೆ ಸಲ್ಲಿಸಲು 2025ರ ಡಿಸೆಂಬರ್ ಮಾಹೆಯಲ್ಲೇ ಆದೇಶ ನೀಡಿದ್ದಾರೆ. ಆದರೆ, ಈವರೆಗೆ ಆದೇಶ ಬಂದಿಲ್ಲ ಎಂದು ದೂರಿದರು.
ಮಂಡ್ಯ ಕಚೇರಿಯಿಂದ ಪ್ರಸ್ತಾವನೆ ಸಲ್ಲಿಸಿದ್ದು ಆಯುಕ್ತರಿಂದ ಆದೇಶ ಬರುತ್ತದೆ ಎಂದು ಈಗ ಹೇಳುತ್ತಿದ್ದೀರಾ. ಎಲ್ಲಿಂದಾದರೂ ಆದೇಶ ತನ್ನಿ ಇಲಾಖೆ ಅಧಿಕಾರಿಗಳೇ ಮುಂದೆ ನಿಂತು ಒಂದು ವಾರದೊಳಗೆ ಆದೇಶ ತಂದು ಸರ್ಕಾರಿ ಪ್ರೌಢಶಾಲೆಯಲ್ಲಿ 8 ನೇ ತರಗತಿಗೆ ಮಕ್ಕಳನ್ನು ದಾಖಲಿಸಿಕೊಂಡು ತರಗತಿ ಆರಂಭಿಸಬೇಕು. ಇಲ್ಲವಾದರೆ ರೈತಸಂಘ ನೀಡಿರುವ ಪ್ರತಿಭಟನೆಗೆ ಪೋಷಕರೊಟ್ಟಿಗೆ ಕೈಜೋಡಿಸಿ ಮಂಡ್ಯ ಡಿಡಿಪಿಐ ಕಚೇರಿಗೆ ಬೀಗಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.