ಕನ್ನಡಪ್ರಭ ವಾರ್ತೆ ಕೋಲಾರಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂಧಿಸುವಲ್ಲಿ ನಗರಸಭೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸೋಮವಾರ ನಗರಸಭೆ ಸದಸ್ಯರು, ಕೋಲಾರ ನಗರಸಭೆ ಆಯುಕ್ತ ಶಿವಾನಂದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕೋಲಾರ ನಗರಸಭೆ ಎಂದರೇನೆ ಹಾಗೆ, ಇಲ್ಲಿ ಸಾಮಾನ್ಯ, ಬಡವರು ಬಂದರೆ ಕೆಲಸಗಳು ಆಗುವುದಿಲ್ಲ. ಸಿಬ್ಬಂದಿಗೆ ಮಾನವೀಯತೆಯಿಲ್ಲ, ದುಡ್ಡು ಕೊಟ್ಟರೆ ಏನು ಬೇಕಾದರು ಮಾಡುತ್ತಾರೆ, ದೂರವಾಣಿ ಕರೆ ಮಾಡಿದರೆ ಕಮಿಷನರ್ ಹು ಆರ್ ಯು ಅಂತಾರೆ, ದಲ್ಲಾಳಿಗಳಿಗೆ ಇರುವ ಗೌರವ ಸದಸ್ಯರಿಗೂ ಇಲ್ಲ ಎಂದು ಪ್ರತಿಭಟನಾ ಸದಸ್ಯರು ಆಕ್ರೋಶ ವ್ಯಕ್ತಪಡಿದರು.ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಮುಗಿದು ೧೦ ತಿಂಗಳು ಮುಗಿದ್ದು, ಜಿಲ್ಲಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ, ಜಿಲ್ಲಾಧಿಕಾರಿ ನಗರಸಭೆ ಕಚೇರಿಗೆ ಬಂದು ಪ್ರತಿವಾರ ಅಧಿಕಾರಿಗಳ ಸಭೆ ನಡೆಸಬೇಕು, ಆದರೆ ಕೋಲಾರ ಡಿಸಿ ಜಿಲ್ಲಾಡಳಿತ ಭವನದಲ್ಲೆ ಕುಳಿತು ಹಲವು ವಿಷಯಗಳಿಗೆ ಅನುಮೋಧನೆ ನೀಡುತ್ತಾರೆ ಎಂದು ಕಿಡಿಕಾರಿದರು.ಇಲ್ಲಿನ ಪೌರಾಯುಕ್ತರಿಗೆ, ಸಿಬ್ಬಂದಿಗೆ ನಗರಸಭೆ ಕಾರ್ಯದ ಬಗ್ಗೆ ಗಂಧಗಾಳಿ ಗೊತ್ತಿಲ್ಲ, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ, ಖಾಸಗಿ ಹೋಟಲ್‌ಗಳಲ್ಲಿ ಕುಳಿತು ಕಡತಗಳನ್ನು ವಿಲೇವಾರಿ ಮಾಡುತ್ತಾರೆ. ಸಿಬ್ಬಂದಿಯಂತೂ ಇನ್ನು ಮೀತಿ ಮೀರಿ ಹೋಗಿದ್ದಾರೆ, ದಲ್ಲಾಳಿಗಳ ಮೂಲಕ ಬಂದರೆ ಮಾತ್ರ ಕೆಲಸ ಆಗುತ್ತದೆ, ಸದಸ್ಯರ ಮಾತಿಗೆ ಗೌರವ ಕೊಡುವುದಿಲ್ಲ ಎಂದು ಆರೋಪಿಸಿದರು.ಖಾತೆ ಬದಲಾವಣೆ, ತೆರಿಗೆ ಪಾವತಿ, ಟ್ರೇಡ್ ಲೈಸನ್ಸ್, ದಾಖಲೆ ತಿದ್ದುಪಡಿ ಹೀಗೆ ಹಲವು ಕೆಲಸಗಳಿಗೆ ನಗರವಾಸಿಗಳು ಅರ್ಜಿಗಳನ್ನು ಸಲ್ಲಿಸಿರುತ್ತಾರೆ, ಹಿರಿಯನಾಗರೀಕರು ಪ್ರತಿದಿನ ಕಚೇರಿಗೆ ಅಲೆದಾಡಿದರು ಅರ್ಜಿ ವಿಲೇವಾರಿ ಆಗಿರುವುದಿಲ್ಲ, ರ್ಬತ್ ಅಂಡ್‌ಡೇತ್ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಈ ವಿಭಾಗದಲ್ಲಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾದರೆ ದಿನಗಳ ಕಟ್ಟಲೆ ಕಾಯಬೇಕು. ಜನತೆ ಎಷ್ಟೇ ಸಮಸ್ಯೆ ಅನುಭವಿಸುತ್ತಿದ್ದರು ಅಧಿಕಾರಿಗಳಿಗೆ, ಸಿಬ್ಬಂದಿಗೆ ಗಂಭೀರತೆಯಿಲ್ಲದಂತಾಗಿದೆ ಎಂದು ದೂರಿದರು.ನಗರದ ವಿವಿಧ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ನಗರಸಭೆಯ ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಿದರೆ ಉತ್ತರ ನೀಡುವವರು ಇಲ್ಲವಾಗಿದೆ. ಇಂಜನಿಯರ್‌ಗಳಂತೂ ಕೈಗೆ ಸಿಗುವುದಿಲ್ಲ. ಇವರಿಗೆಲ್ಲ ಸರ್ಕಾರಿ ಕೆಲಸಗಿಂತ ಖಾಸಗಿ ವ್ಯವಹಾರವೆ ಮುಖ್ಯವಾಗಿದೆ. ಯರಗೋಳ್ ಪೈಪ್‌ಲೈನ್ ಹಾನಿಯಾಗಿ ನೀರು ಪೋಲಾಗುತ್ತಿದೆ. ಗೊತ್ತಿದ್ದರು ಸಹ ದುಡ್ಡು ಹೊಡೆಯುವ ಸ್ಕೀಂಗಳಿಗೆ ಕೈಹಾಕುತ್ತಾರೆ ಹೊರತು ಅಭಿವೃದ್ಧಿಗೆ ಒತ್ತು ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಷ್ಟು ದಿನ ಅಧಿಕಾರಿಗಳು, ಸಿಬ್ಬಂದಿ ಚುನಾವಣೆಯ ನೆಪ ಹೇಳಿಕೊಂಡು ಓಡಾಡುತ್ತಿದ್ದರು, ಮತದಾನ ಮುಗಿದಿದ್ದು ಇನ್ನಾದರು ಬಡವರ ಕೆಲಸಗಳತ್ತ ಗಮನ ಹರಿಸಬೇಕು ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಪ್ರವೀಣ್ ಗೌಡ, ನಾಜಿಯಾ ಬಾಬಾ ಜಾನ್, ಸಂಗೀತಾ ಜಗದೀಶ್ ಇದ್ದರು.