ಹಾವೇರಿ: ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಕರವಸೂಲಿಗಾರರು, ನೀರುಗಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಗ್ರಾಮ ಪಂಚಾಯಿತಿ ಪಂಚ ನೌಕರರ ಸಂಘ ಜಿಲ್ಲಾ ಸಮಿತಿ ಪದಾಧಿಕಾರಿಗಳು ಅ.12ರಿಂದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳುವ ಕುರಿತು ಜಿಪಂ ಸಿಇಒ ದಲ್ಜೀತ್‌ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮೀಣ ಜನರಿಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ದೈನಂದಿನ ಮೂಲಸೌಕರ್ಯ ಒದಗಿಸುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಪಂಚ ನೌಕರರ ಪಾತ್ರ ಮಹತ್ವದ್ದಾಗಿದೆ. ಪಂಚಾಯಿತಿ ಸದಸ್ಯರು ಮತ್ತು ಆಡಳಿತ ಮಂಡಳಿಗೆ ಸಹಕಾರ ನೀಡುವುದರ ಜತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇತರ ಇಲಾಖೆಗಳ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ.
ನೌಕರರ ಶ್ರಮದಿಂದ ಇಲಾಖೆಗೆ ರಾಜ್ಯ ಮತ್ತು ರಾಷ್ಟçಮಟ್ಟದ ಪ್ರಶಸ್ತಿಗಳು ಲಭಿಸಿದ್ದರೂ, ಪಂಚಾಯಿತಿ ಸಿಬ್ಬಂದಿಗೆ ಸಮರ್ಪಕ ವೇತನ ಹೆಚ್ಚಳವಾಗಿಲ್ಲ. ಕಡಿಮೆ ವೇತನ ಮತ್ತು ಸೇವಾ ಭದ್ರತೆಯ ಕೊರತೆಯಿಂದ ನೌಕರರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.ಪ್ರಮುಖ ಬೇಡಿಕೆಗಳು: ವೇತನ ಹೆಚ್ಚಳ, ಸೇವಾ ಹಿರಿತನದ ಆಧಾರದ ಮೇಲೆ ವೇತನ, ಸರ್ಕಾರದಿಂದ ನೇರ ವೇತನ ಪಾವತಿ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ಮಂಜೂರು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ.
ಈ ವೇಳೆ ಜಿಲ್ಲಾ ಪಂಚಾಯಿತಿ ಪಂಚ ನೌಕರರ ಸಮಿತಿ ಅಧ್ಯಕ್ಷ ನಿಂಗಪ್ಪ ಹೌಂವಸಿ, ನೌಕರರ ಮುಖಂಡರಾದ ಹಾಲೇಶ ಬಾರ್ಕಿ, ವೆಂಕಟೇಶ ಗೋವಿಂದರಡ್ಡೇರ, ಜಗದೀಶ ಹೆಗ್ಗೇರಿ, ಫಕ್ಕಿರೇಶ ನಲ್ಲೂರ, ಗುರುಪಾದಪ್ಪ ಬಳ್ಳೊಳ್ಳಿ, ಸುಮಂತರೆಡ್ಡಿ ಪುಟ್ಟಪ್ಪನವರ ಹಾಗೂ ಬಸವರಾಜ ಯಡಗೊಡಿ ಉಪಸ್ಥಿತರಿದ್ದರು.