ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಹೊರ ಗುತ್ತಿಗೆ ನೌಕರರ 11 ತಿಂಗಳ ಬಾಕಿ ವೇತನ ಪಾವತಿಸಬೇಕು. ರಾಜ್ಯ ಸರ್ಕಾರದ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಹೊರಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ. ಈ ಕುರಿತು ಸಂಘದ ಪ್ರಮುಖರು ಮಂಗಳವಾರ ಕನ್ನಡ ವಿವಿ ಕುಲಪತಿಗೆ ಮನವಿ ಸಲ್ಲಿಸಿ ಕನ್ನಡ ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹೊರ ಗುತ್ತಿಗೆ ನೌಕರರು ಕಳೆದ 11 ತಿಂಗಳಿಂದ ವೇತನವಿಲ್ಲದೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾಲಕಾಲಕ್ಕೆ ಸಂಬಳ ಪಾವತಿಯಾಗದ ಕಾರಣ ಕಳೆದ 2024ರ ಏಪ್ರಿಲ್‌ನಲ್ಲಿ ಹೊರಗುತ್ತಿಗೆ ನೌಕರ ನಾಯಕರ ನಂದೆಪ್ಪ ಎಂಬುವವರು ದುರಂತ ಸಾವಿಗೀಡಾಗಿದ್ದು, ಅವರ ಸಾವಿನ ಸೂತಕದಿಂದ ಕನ್ನಡ ವಿವಿ ಇನ್ನೂ ಹೊರ ಬಂದಿಲ್ಲ ಎಂದು ದೂರಿದರು.
ಮನವಿ ಸ್ವೀಕರಿಸಿದ ಕನ್ನಡ ವಿವಿ ಕುಲಪತಿ ಡಾ. ಪರಮಶಿವಮೂರ್ತಿ, ಆಗಸ್ಟ್ 18ರ ಒಳಗಾಗಿ ಮೂರು ತಿಂಗಳ ಸಂಬಳವನ್ನು ಸಂಬಂಧಿಸಿದ ಏಜೆನ್ಸಿಯಿಂದ ಕೊಡಿಸುತ್ತೇನೆ. ರಾಜ್ಯ ಸರ್ಕಾರದಿಂದ ಬರಬೇಕಿದ್ದ ಜೂನ್ ತಿಂಗಳ ತ್ರೈಮಾಸಿಕ ಅನುದಾನ ವಿಳಂಬವಾಗಿದ್ದರಿಂದ ಸಮಸ್ಯೆಯಾಗಿದೆ. ಅದೂ ಸದ್ಯದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ, ಉಪಾಧ್ಯಕ್ಷ ಗದಿಗೆಯ್ಯ, ಪ್ರಧಾನ ಕಾರ್ಯದರ್ಶಿ ನಾಗೂ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು.