ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಲೇಖಕಿಯರ ಸಮ್ಮೇಳನದಲ್ಲಿ ಸಮಕಾಲೀನ ತಲ್ಲಣಗಳು ಗೋಷ್ಠಿಯಲ್ಲಿ ಗಾರ್ಮೆಂಟ್ಸ್ ಉದ್ಯಮದಲ್ಲಿ ಮಹಿಳೆಯರು ವಿಷಯದ ಕುರಿತ ಮಾತನಾಡಿ, ಮುಟ್ಟಿನ ರಜೆಯನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಸರಿಯಲ್ಲ. ಮುಟ್ಟಿನ ವೇಳೆ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಮನೋಭಾವವನ್ನು ಉದ್ಯಮಿಗಳು, ಮಾಲೀಕರು ಬೆಳೆಸಿಕೊಳ್ಳಬೇಕು ಎಂದರು.
ಮುಟ್ಟಿನ ರಜೆಯನ್ನು ಈಗಾಗಲೇ ಬಿಹಾರ, ಒಡಿಶಾ ರಾಜ್ಯಗಳಲ್ಲಿ ನೀಡಲಾಗುತ್ತಿದೆ. ಅದರಂತೆ ಕರ್ನಾಟಕ ಸರ್ಕಾರವೂ ವೇತನ ಸಹಿತ ಮುಟ್ಟಿನ ರಜೆ ನೀಡುವಂತೆ ಆದೇಶ ಹೊರಡಿಸಿದೆ. ಆದರೆ, ಮಹಿಳೆಯರಿಗೆ ರಜೆ ನೀಡುವುದಕ್ಕೆ ಕಾರ್ಖಾನೆಗಳು, ಉದ್ಯಮಿಗಳು, ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಮಹಿಳೆಯರಿಗೆ ನೀಡಬೇಕಾದ ಮುಟ್ಟಿನ ರಜೆ ವೇತನವನ್ನು ವಾರ್ಷಿಕವಾಗಿ ಲೆಕ್ಕ ಹಾಕುತ್ತಿದ್ದಾರೆ. ಅದಕ್ಕಾಗಿ ರಜೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.ಆಗ ಮಧ್ಯಪ್ರವೇಶಿಸಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಆರ್.ಸುನಂದಮ್ಮ ಮಾತನಾಡಿ, ಮುಟ್ಟು ಮಹಿಳೆಯರ ವೈಯಕ್ತಿಕ ಸಮಸ್ಯೆಯಲ್ಲ, ಅದು ಸಮಾಜದ ಸಮಸ್ಯೆ. ಉತ್ಪಾದಕರನ್ನು ಉತ್ಪಾದಿಸುವವಳು ಮಹಿಳೆ. ಅದಕ್ಕಾಗಿ ಸಮಾಜ ಮಹಿಳೆಯರಿಗೆ ಸ್ಪಂದಿಸಲೇಬೇಕು ಎಂದು ಪ್ರತಿಪಾದಿಸಿದರು.
ಗೋಷ್ಠಿಯಲ್ಲಿ ಮಾತು ಮುಂದುವರೆಸಿದ ಡಾ.ಆರ್.ಪ್ರತಿಭಾ ಅವರು, ಹೆರಿಗೆ ರಜೆ ನೀಡುವ ಸಮಯದಲ್ಲೂ ಇದೇ ವಾದಗಳು ಮುಂಚೂಣಿಗೆ ಬಂದಿದ್ದವು. ಈಗ ಮುಟ್ಟಿನ ರಜೆಗೂ ದುರುಪಯೋಗದ ಆರೋಪಗಳು ಕೇಳಿಬರುತ್ತಿವೆ. ಮಹಿಳೆಯರು ಅದನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಲೇಖಕಿಯರ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಟಿ.ಸಿ.ಪೂರ್ಣಿಮಾ ಹಾಗೂ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇದ್ದರು.