ಕನ್ನಡಪ್ರಭ ವಾರ್ತೆ ಚಾಮರಾಜನಗರನಮ್ಮ ಸುತ್ತಮುತ್ತಲಿನ ಪರಿಸರ ರಕ್ಷಣೆ ಹಾಗೂ ನೀರಿನ ಸದ್ಬಳಕೆ ಮಾಡಿಕೊಳ್ಳಲು ಮೊದಲು ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ರೋಟರಿ ೩೧೮೧ರ ಮೆಡಲ್ ಆರೋಗ್ಯ ಮುಖ್ಯಸ್ಥ ರೋ. ಕಿರಣ್ ಪ್ರಸಾದ್ ರೈ ತಿಳಿಸಿದರು.
ರೋಟರಿ ಜಿಲ್ಲೆ ೩೧೮೧ರಿಂದ ವಲಯ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಕುಂದೋಳ ಗಣೇಶ್ ಅವರ ಜಾದೂ ಮೂಲಕ ಪರಿಸರ ಸಂರಕ್ಷಣೆ ನೀರು ಸದ್ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇತ್ತಿಚಿನ ದಿನಗಳಲ್ಲಿ ನೀರು ಎಷ್ಟು ಮುಖ್ಯ ಎಂದು ಎಲ್ಲರಿಗೂ ಅರಿವಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆ ಮಾಡುವ ರೋಟರಿ ಅಭಿಯಾನಕ್ಕೆ ಎಲ್ಲರು ಕೈಜೋಡಿಸಬೇಕು. ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದಕ್ಕು ಮಿಗಲಾಗಿ ನಮ್ಮ ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಂಡರೆ ಎಲ್ಲವು ಸಾಧ್ಯವಾಗುತ್ತದೆ ಎಂದರು.
ರೋಟರಿ ಸಹಾಯಕ ಗವರ್ನರ್ ಆರ್. ಪ್ರಕಾಶ್ ಮಾತನಾಡಿ, ರೋಟರಿ ೩೧೮೧ರ ವಲಯದ ಎಲ್ಲಾ ಗವರ್ನರ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪರಿಸರ ಸಂರಕ್ಷಣೆ. ನೀರಿನ ಸದ್ಬಳಕೆ ಕುರಿತು ಜಾಗೃತಿ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಜೆಎಸ್‌ಎಸ್ ಕಾಲೇಜು ಕ್ಯಾಂಪಸ್ ನಡೆದಿದೆ. ನಿಮ್ಮೆಲ್ಲರ ಆಶಯದ ಜೊತೆಗೆ ನಾವು ಸಹ ಕೈ ಜೋಡಿಸಿ ಪರಿಸರ ಸಂರಕ್ಷಣೆಯಲ್ಲಿ ಬದ್ದರಾಗಿದ್ದೇವೆ ಎಂದರು.ಜಾದುಗಾರರಾದ ಕುಂದೋಳ್ ಗಣೇಶ್ ಜಾದೂ ಮೂಲಕ ನೀರಿನ ಸಂರಕ್ಷಣೆ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ದಿಸಿಕೊಳ್ಳುವ ಬಗ್ಗೆ ಪ್ರದರ್ಶನ ನೀಡಿ, ಆತ್ಮಹತ್ಯೆ ತಡೆಯಲು ಅನುಸರಿಸಬೇಕಾದ ಕ್ರಮವನ್ನು ಮಾನಸಿಕ ಶಕ್ತಿಯನ್ನು ವೃದ್ದಿಸಿಕೊಳ್ಳುವ ಕುರಿತು ಅರಿವು ಮೂಡಿಸಿದರು.