"ಶತಮಾನ ಕಂಡ ಹುಕ್ಲಮಕ್ಕಿ ಮೇಳದ ಯಕ್ಷಗಾನ ಸಂಭ್ರಮ ", ಸಂಸ್ಮರಣೆ, ಯಕ್ಷಗಾನ ಕಾರ್ಯಕ್ರಮ
ಸಂಗೀತ ಹಾಗೂ ಯಕ್ಷಗಾನ ಮನಸ್ಸಿಗೆ ಮುದ ನೀಡುವ ಮಾತ್ರವಲ್ಲದೇ ಮಾನಸಿಕ ನೆಮ್ಮದಿಯನ್ನೂ ನೀಡುವ ಕಲಾಪ್ರಕಾರಗಳು. ಜಿಲ್ಲೆಯಲ್ಲಿ ಕರಾವಳಿಯ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನದಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ. ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಅಪಾರ ಗೌರವ ಇದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಯಕ್ಷಗಾನ ಸಂಶೋಧನಾ ಕೇಂದ್ರ ಹಾಗೂ ಸತ್ವಾಧಾರ ಫೌಂಡೇಶನ್ ಸಹಯೋಗದಲ್ಲಿ ಇಲ್ಲಿನ ಹವ್ಯಕ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ''''''''ಶತಮಾನ ಕಂಡ ಹುಕ್ಲಮಕ್ಕಿ ಮೇಳದ ಯಕ್ಷಗಾನ ಸಂಭ್ರಮ'''''''' ಸಂಸ್ಮರಣೆ, ಸಂಗೀತ ಸುಧೆ, ಸನ್ಮಾನ, ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಂಕಣಕಾರ ನಾರಾಯಣ ಯಾಜಿ ಸಾಲೇಬೈಲು ಮಾತನಾಡಿ, ನೂರು ವರ್ಷಗಳ ಯಕ್ಷಗಾನ ಮೇಳವೊಂದನ್ನು ಗುರುತಿಸಿ ಅದರಲ್ಲಿ ದುಡಿದವರ ಸ್ಮರಣೆ ಮಾಡುವುದು ವಿಭಿನ್ನ ಪರಿಕಲ್ಪನೆ. ಯಕ್ಷಗಾನವು ಕಲಾ ಬದುಕು ಕಟ್ಟಿಕೊಂಡವರಿಗೆ ಬಹುದೊಡ್ಡ ಸಾಧನಾ ಕ್ಷೇತ್ರವಾಗಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಿರುವುದು ಬಹು ವಿಶೇಷ ಎಂದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಮಂಜುನಾಥ ಭಟ್ಟ ಸುವರ್ಣಗದ್ದೆ ಮಾತನಾಡಿದರು. ಯಕ್ಷರಂಗ ಪತ್ರಿಕೆಯ ಸಂಪಾದಕ ಗೋಪಾಲಕೃಷ್ಣ ಭಾಗ್ವತ್, ಯಕ್ಷಗಾನ ಪ್ರಸಾದನ ಕಲಾವಿದ ಮೂರೂರಿನ ರಾಮ ಹೆಗಡೆಗೆ ಹುಕ್ಲಮಕ್ಕಿ ಮೇಳದ ಶತಮಾನದ ಸನ್ಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗಾಯಕ ಹಿಮಾಂಶು ಪ್ರಕಾಶ ಮುಂಬೈ ಅವರ ಹಿಂದುಸ್ತಾನಿ ಗಾಯನಕ್ಕೆ ತಬಲಾದಲ್ಲಿ ಮಳೆ ಮಲ್ಲೇಶ ಹೂಗಾರ್, ಹಾರ್ಮೋನಿಯಂನಲ್ಲಿ ಅಜಯ್ ಹೆಗಡೆ ಸಾಥ್ ನೀಡಿದರು. ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿಯಿಂದ ಇಂದ್ರಜಿತು ಕಾಳಗ ಯಕ್ಷಗಾನ ಪ್ರೇಕ್ಷಕರ ಮನಗೆದ್ದಿತು. ಭಾಗವತರಾಗಿ ಗೋಪಾಲ ಭಟ್ಟ ಜೋಗಿಮನೆ, ಶಂಕರ ಭಟ್ಟ ಬ್ರಹ್ಮೂರು, ಮದ್ದಳೆಯಲ್ಲಿ ನರಸಿಂಹ ಹೆಗಡೆ ಮೂರೂರು, ಚಂಡೆಯಲ್ಲಿ ಗಜಾನನ ಹೆಗಡೆ ಕೋಣಾರೆ ಕಾರ್ಯನಿರ್ವಹಿಸಿದರು. ವಿನಾಯಕ ಹೆಗಡೆ ಕಲಗದ್ದೆ, ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ, ಡಾ. ಜಿ.ಎಲ್. ಹೆಗಡೆ ಕುಮಟಾ, ಡಾ. ಎಂ.ಆರ್. ನಾಯಕ, ವಿಶ್ವೇಶ್ವರ ಹಾವಗೋಡಿ, ವೆಂಕಟೇಶ ಹೆಗಡೆ ಬೊಗ್ರಿಮಕ್ಕಿ, ನಾಗೇಂದ್ರ ಮೂರೂರು, ಮಹಾವೀರ ಜೈನ, ಗಣಪತಿ ಹೆಗಡೆ ನಿಲಕೋಡ, ಪಾಂಡು ಪಟಗಾರ ಸಂಡಳ್ಳಿ ಇತರರು ಪಾತ್ರ ನಿರ್ವಹಿಸಿದರು.