ಗದಗ: ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆಧ್ಯಾತ್ಮಿಕ ವಿಚಾರ, ಪುರಾಣ ಪ್ರವಚನ ಆಲಿಸುವುದರಿಂದ ಮನುಷ್ಯ ಸಹಜವಾಗಿ ಸನ್ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಮಾನಸಿಕವಾಗಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ವೈದ್ಯ ಡಾ. ಎನ್.ಎಸ್. ಬಿರಾದಾರ ಹೇಳಿದರು.
ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ದೇವಿ ಪೂಜೆ ಎಂದರೆ ಅದು ದೇಹದ ಪೂಜೆ ಎಂದರ್ಥ. ನಾವು ನಮ್ಮ ಆತ್ಮಾವಲೋಕ, ಮನಶುದ್ಧೀಕರಣ ಮಾಡಿಕೊಳ್ಳುವ ಮೂಲಕ ಧರ್ಮದ ಪಥದಲ್ಲಿ ಮುನ್ನಡೆಯಬೇಕು ಅಂತಹ ಸನ್ಮಾರ್ಗ ಅಡವೀಂದ್ರ ಮಠ ಶಿವಾನುಭವ, ಪುರಾಣ, ಪ್ರವಚನ- ಜಾತ್ರಾ ಕಾರ್ಯಕ್ರಮಗಳ ಮೂಲಕ ಜನಮನದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುತ್ತಿದೆ ಎಂದರು.
ಈ ವೇಳೆ ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಪುರಾಣ ಪ್ರವಚನ, ಚನ್ನಬಸಯ್ಯಶಾಸ್ತ್ರಿ ಹೇಮಗಿರಿಮಠ ಅವರಿಂದ ಪುರಾಣ ಪಠಣ, ಸುಕ್ರುಸಾಬ್ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಜಿ. ಭಜಂತ್ರಿ ಅವರ ಸಂಗೀತ ಕಲಾ ಬಳಗದಿಂದ ಸಂಗೀತ ಜರುಗಿತು.ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಸಮ್ಮುಖ ವಹಸಿದ್ದರು. ಅರವಿಂದ ವಸ್ತ್ರದ, ಲಲಿತಾ ವಸ್ತ್ರದ, ಶೋಭಾ ಬಿರಾದಾರ ಇದ್ದರು. ಯಶೋಧಾ ಗಿಡ್ನಂದಿ ಸ್ವಾಗತಿಸಿದರು. ಜಿ.ಎಂ. ಯಾನಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗೀತಾ ಹೂಗಾರ ವಂದಿಸಿದರು.