ಧಾರವಾಡ:
ಯಾವಾಗ ಬೌದ್ಧಿಕ ಅಪಾಯ ಉಂಟಾಗುತ್ತದೆಯೋ ಆಗ ಮಾನಸಿಕ ಆಘಾತವು ಹೆಚ್ಚಾಗುತ್ತದೆ. ಆ ಸಮಯದಲ್ಲಿ ಸಹಾಯ ಅತ್ಯಗತ್ಯ ಎಂದು ಡಿಮಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಹೇಳಿದರು.ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಿಮಾನ್ಸ್, ಭಾರತೀಯ ವೈದ್ಯಕೀಯ ಸಂಘವು ಕರ್ನಾಟಕ ವಿಜ್ಞಾನ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಜಾಥಾ ಉದ್ಘಾಟಿಸಿದ ಅವರು, ಮಾನಸಿಕ ಆರೋಗ್ಯವಿಲ್ಲದೇ ದೈಹಿಕ ಆರೋಗ್ಯವು ಸಂಪೂರ್ಣವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮನಸ್ಸಿಗೆ ದೊರೆಯುವ ಆರೈಕೆ ಬದುಕಿನ ಬಾಳು ಬದಲಾಯಿಸಬಲ್ಲ ಔಷಧಿಯಾಗುತ್ತದೆ ಎಂದರು.
ಟೆಲಿಮಾನಸ್ ಯೋಜನೆ ಉಚಿತವಾಗಿ ದೂರವಾಣಿ ಮೂಲಕ ಮಾನಸಿಕ ಸಹಾಯ ನೀಡುತ್ತಿದೆ. ಟೆಲಿಮಾನಸ್ ಒಂದು ಜೀವಧಾರೆಯಾಗಿದೆ. ಸೇವೆಯೆಂದರೆ ಕೇವಲ ಆಸ್ಪತ್ರೆಯಲ್ಲ, ಅದು ಕೇಳುವ ಕಿವಿ, ಸಹಾಯಮಾಡುವ ಕೈ ಮತ್ತು ದಯೆಯ ಮನಸ್ಸು ಕೂಡ ಹೌದು, ಒಬ್ಬರು ಕೇಳಿದರೆ ಅಳುವ ಮನಸ್ಸು ಕೂಡ ನಗುತ್ತದೆ, ಮನಸ್ಸು ಸೌಖ್ಯವಾಗಿದ್ದರೆ ಬದುಕು ಸುಗಮವಾಗುತ್ತದೆ ಎಂದು ಹೇಳಿದರು. ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ, ಮನೋರೋಗಗಳ ಬಗ್ಗೆ ಮೂಢನಂಬಿಕೆಗಳನ್ನು ಹೋಗಲಾಡಿಸುವುದರಲ್ಲಿ ಇಂತಹ ಜಾಥಾಗಳು ಸಾಕಷ್ಟು ಪರಿಣಾಮಕಾರಿ. ಈ ದಿಶೆಯಲ್ಲಿ ಮನೆ ಮತ್ತು ಮನಗಳಿಗೆ ಈ ಸಂದೇಶ ಮುಟ್ಟುವಲ್ಲಿ ಈ ಜಾಥಾ ಅರ್ಥಪೂರ್ಣ ಎಂದರು. ಭಾರತೀಯ ವೈದ್ಯಕೀಯ ಸಂಘದ ಡಾ. ಜಗದೀಶ ನಿರಡಿ ಮಾತನಾಡಿ, ಮನೋರೋಗಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವಲ್ಲಿ ತಮ್ಮ ಸಂಘವು ಅನೇಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದರು.ಪ್ರಾಚಾರ್ಯರಾದ ಮಂಜರಿ ಸಾಳುಂಕೆ, ಡಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ನಾಯಕ್, ಶ್ರೀನಿವಾಸ ವಾಡಪ್ಪಿ, ಡಾ. ಶಿವಕುಮಾರ ಕುಂಬಾರ, ಡಾ. ರಾಜೀವ ಘೋಟೆ, ಜ್ಯೋತಿ ದೊಡ್ಡಮನಿ, ಡಾ. ಗೀತಾ ಉತ್ತೂರು, ಡಾ. ರಂಗನಾಥ ಕುಲಕರ್ಣಿ, ಡಾ. ಆದಿತ್ಯ ಪಾಂಡುರಂಗಿ, ಡಾ. ತೇಜಸ್ವಿ ಪಿ. ಡಾ. ಸ್ವಪ್ನಾ ಪಾಂಡುರಂಗಿ, ಡಾ. ಮೇಘಮಾಲಾ ತಾವರಗಿ ಇದ್ದರು. ಜಾಥಾವು ಕರ್ನಾಟಕ ಕಾಲೇಜಿನಿಂದ ಪ್ರಾರಂಭಗೊಂಡು ಎಲ್ಐಸಿ, ಕೆ.ಸಿ ಪಾರ್ಕ್ ಮಾರ್ಗವಾಗಿ ಡಿಮ್ಹಾನ್ಸ್ ಸಂಸ್ಥೆಗೆ ತಲುಪಿತು.