ಬುದ್ದಿಮಾಂದ್ಯ ಬಾಲಕನ ಮೇಲೆ ಹಲ್ಲೆ; ನಾಲ್ವರು ಆರೋಪಿಗಳ ಬಂಧನ

KannadaprabhaNewsNetwork |  
Published : Dec 22, 2025, 03:00 AM IST
ದಿವ್ಯಜ್ಯೋತಿ ಬುದ್ಧಮಾಂದ್ಯ ಮಕ್ಕಳ ವಸತಿ ಶಾಲೆಗೆ ಜೆಎಂಎಫ್ಸಿ ನ್ಯಾಯಾಲಯದ ಪ್ರದಾನ ದಿವಾಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕಿ ಭೇಟಿ ನೀಡಿ ಪರಿಶೀಲಿಸಿದರು | Kannada Prabha

ಸಾರಾಂಶ

ಅನಧೀಕೃತವಾಗಿ ವಸತಿ ಶಾಲೆ ತೆರೆದು ಅಲ್ಲಿಗೆ ಬರುವ ಬುದ್ದಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಪೈಶಾಚಿಕ ಕೃತ್ಯ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅನಧೀಕೃತವಾಗಿ ವಸತಿ ಶಾಲೆ ತೆರೆದು ಅಲ್ಲಿಗೆ ಬರುವ ಬುದ್ದಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಪೈಶಾಚಿಕ ಕೃತ್ಯ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಶಾಲೆಯಲ್ಲಿದ್ದ 28 ಮಕ್ಕಳನ್ನು ಪಾಲಕರನ್ನು ಕರೆಸಿ ಅವರ ವಶಕ್ಕೆ ಒಪ್ಪಿಸಿದ್ದು, ಇನ್ನೂ ಮೂವರು ಮಕ್ಕಳು ಉಳಿದಿದ್ದು, ಸೋಮವಾರ ಅವರ ಪಾಲಕರು ಬಂದು ಕರೆದುಕೊಂಡು ಹೋಗಲಿದ್ದಾರೆ.

ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 54ರಲ್ಲಿ ಇರುವ ಸಿದ್ದಗಿರಿ ಸಂಸ್ಥೆಯ ಅಡಿಯಲ್ಲಿ ಪರವಾನಗಿ ಪಡೆಯದೇ ದಿವ್ಯಜ್ಯೋತಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯನ್ನು ಆರಂಭಿಸಿದ್ದ ಮಹಾರಾಷ್ಟ್ರ ಮೂಲದ ಅಕ್ಷಯ ಇಂದುಲ್ಕರ್ ದಂಪತಿ ಬಾಲಕನೊಬ್ಬನ ಮೇಲೆ ತೀವ್ರ ಹಲ್ಲೆ ನಡೆಸಿ, ಬಾಯಿ, ಕಣ್ಣಿಗೆ ಖಾರಪುಡಿ ಹಾಕುವ ವಿಡಿಯೋ ಶನಿವಾರ ವೈರಲ್ ಆಗಿ, ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಬಾಲಕನ ತಂದೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶನಿವಾರವೇ ಆರೋಪಿಗಳನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ಕೈಗೊಂಡಿದ್ದ ಪೊಲೀಸರು, ಭಾನುವಾರ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಇದಕ್ಕೂ ಮುನ್ನ ಬಾಲಕನ ಮೇಲೆ ಹಲ್ಲೆ ನಡೆದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶನಿವಾರ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆಯಲ್ಲಿ ಇರುವ ಮಕ್ಕಳ ಪಾಲಕರಿಗೆ ಫೋನ್ ಮಾಡಿ, ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಅದರಂತೆ ಭಾನುವಾರ ಬೆಳಗ್ಗೆಯಿಂದಲೇ ಜಿಲ್ಲೆ ಸೇರಿದಂತೆ ವಿಜಯಪುರ, ಕಲಬುರಗಿ, ಕೊಪ್ಪಳ, ಮಹಾರಾಷ್ಟ್ರದ ಸಾಂಗ್ಲಿ ಸೇರಿದಂತೆ ವಿವಿಧೆಡೆಯಿಂದ ಪಾಲಕರು ಶಾಲೆಗೆ ಆಗಮಿಸಿ, ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.

ಸಂಜೆವರೆಗೂ ಒಟ್ಟು 28 ಮಕ್ಕಳು ಅವರ ಅವರ ಪಾಲಕರ ಜೊತೆಗೆ ತೆರಳಿದ್ದು, ಇನ್ನು ಮೂವರು ವಿದ್ಯಾರ್ಥಿಗಳು ಶಾಲೆಯಲ್ಲಿ ಇದ್ದಾರೆ. ಇದರಲ್ಲಿ ಓರ್ವ ಬಾಲಕನನ್ನು ಭಾನುವಾರ ರಾತ್ರಿ ಪಾಲಕರು ಕರೆದುಕೊಂಡು ಹೋಗಲಿದ್ದು, ಇನ್ನಿಬ್ಬರ ಪಾಲಕರು ಸೋಮವಾರ ಶಾಲೆಗೆ ಆಗಮಿಸಿ, ಕರೆದುಕೊಂಡು ಹೋಗಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ತಿಳಿಸಿದರು.

ಬಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥ ಹಾಗೂ ಶಿಕ್ಷಕನಾಗಿದ್ದ ಅಕ್ಷಯ ಇಂದುಲ್ಕರ್, ಅವರ ಪತ್ನಿ ಮಾಲಿನಿ ಊರ್ಫ ಆನಂದಿ ಹಾಗೂ ರವಿ ಮತ್ತು ವಿಶಾಲ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದು, ಭಾನುವಾರ ಬೆಳಗ್ಗೆ ಡಿಎಸ್ಪಿ ಗಜಾನನ ಸುತಾರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳನ್ನು ಶಾಲೆಗೆ ಕರೆದುಕೊಂಡು ಬಂದು ಸ್ಥಳ ಮಹಜರು ಹಾಗೂ ಹಲ್ಲೆಗೆ ಬಳಕೆ ಮಾಡಿದ್ದ ವಸ್ತುಗಳನ್ನು ಸೀಜ್ ಮಾಡಿಕೊಂಡರು. ಬಳಿಕ ಆರೋಪಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಇದಕ್ಕೂ ಮುನ್ನ ದಿವ್ಯಜ್ಯೋತಿ ಬುದ್ದಮಾಂದ್ಯ ಮಕ್ಕಳ ವಸತಿ ಶಾಲೆಗೆ ಜೆಎಂಎಫ್‌ಸಿ ನ್ಯಾಯಾಲಯದ ಪ್ರದಾನ ದಿವಾಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕಿ ಭೇಟಿ ನೀಡಿ ಪರಿಶೀಲಿಸಿ, ಪೊಲೀಸರು ಹಾಗೂ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಗಿರಿಜಾ ಪಾಟೀಲ ಹಾಗೂ ಇತರರಿಂದ ಮಾಹಿತಿ ಪಡೆದುಕೊಂಡರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸಹ ಶಾಲೆಗೆ ಭೇಟಿ ನೀಡಿ, ಮಕ್ಕಳ ಮೇಲಿನ ಹಲ್ಲೆ ಬಗ್ಗೆ ಮಾಹಿತಿ ಕಲೆಹಾಕಿ, ಶಿಕ್ಷಕರ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರಿಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಇಲಾಖೆ ಸಚಿವರ ಜೊತೆಗೆ ಮಾತನಾಡುತ್ತೇನೆ. ಹಾಗೆಯೇ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿ ಮಾಧ್ಯಮಗಳಿಗೆ ತಿಳಿಸಿದರು. ಶಾಲೆಗೆ ವೈದ್ಯರನ್ನು ಕರೆಯಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ಸಹ ಇಲಾಖೆ ಅಧಿಕಾರಿಗಳು ಮಾಡಿಸಿದರು.ಬಾಗಲಕೋಟೆಯ ಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಇದೊಂದು ಅಮಾನವೀಯ ಘಟನೆ. ಮಕ್ಕಳ ರಕ್ಷಣಾ ಹಕ್ಕುಗಳೆಲ್ಲ ಉಲ್ಲಂಘನೆಯಾಗಿವೆ. ಈಗ ದೈಹಿಕವಾಗಿ ಸದೃಢವಿರುವ ಮಕ್ಕಳನ್ನು ಹೊಡೆದರೆ ಅಪರಾಧ ಎಂದು ಪರಿಗಣಿಸಿ ಶಿಕ್ಷೆ ನೀಡುತ್ತೇವೆ. ಹೀಗಿರುವಾಗ ಬುದ್ದಿಮಾಂದ್ಯ ಮಕ್ಕಳ ಮೇಲಿನ ಹಲ್ಲೆ ಸಹಿಸುವ ಮಾತೇ ಇಲ್ಲ. ಸರ್ಕಾರದಿಂದ ಅನುಮತಿ ಇಲ್ಲದೆ ಅನಧಿಕೃತವಾಗಿ ಸಂಸ್ಥೆ ತೆರೆದಿದ್ದಾರೆ. ಸಮಾಜಕ್ಕೆ ಕಳಂಕ ತರುವ ಈ ಘಟನೆಯಿಂದ ನಮಗೂ ಮುಜುಗರವಾಗುತ್ತದೆ. ಘಟನೆ ಬೆಳಕಿಗೆ ಬಂದ ತಕ್ಷಣ ಅಧಿಕಾರಿಗಳನ್ನು ಕಳುಸಿದ್ದೇನೆ. ಜಿಲ್ಲಾಧಿಕಾರಿ ಜತೆಗೆ ಮಾತನಾಡಿ, ವಸತಿ ಶಾಲೆ ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲಿನ ಮಕ್ಕಳನ್ನು ಸರ್ಕಾರಿ ಅನುದಾನಿತ ಮಕ್ಕಳ ರಕ್ಷಣಾ ನಿಲಯಕ್ಕೆ ಸ್ಥಳಾಂತರಿಸುತ್ತೇವೆ. ಪಾಲಕರ ಅನುಮತಿ ಮೇರೆಗೆ ಈ ಕ್ರಮ ವಹಿಸುತ್ತೇವೆ.

- ಲಕ್ಷ್ಮೀ ಹೆಬ್ಬಾಳಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?