ಬಳ್ಳಾರಿ: ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಿಂದಾಗಿ ಸಿಬ್ಬಂದಿಯ ದಕ್ಷತೆ ಮತ್ತು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೀಡಲಾದ ಮನವಿಗೆ ಆಡಳಿತ ಮಂಡಳಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರು ನಗರದಲ್ಲಿ ಗುರುವಾರ ಎರಡು ದಿನಗಳ ಧರಣಿ ಆರಂಭಿಸಿದರು.
ಈ ಮುಷ್ಕರವು ಸಂಸ್ಥೆಯ ವಿರುದ್ಧವಲ್ಲ, ಆದರೆ ಸಂಸ್ಥೆಗಾಗಿ, ಸಿಬ್ಬಂದಿ ಮತ್ತು ಸುಸ್ಥಿರ ಕಾರ್ಯಾಚರಣೆಗಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಸ್ಥಿರ, ಪರಿಣಾಮಕಾರಿ ಮತ್ತು ಗ್ರಾಹಕ ಸ್ನೇಹಿ ಬ್ಯಾಂಕಿಂಗ್ ವ್ಯವಸ್ಥೆಗಾಗಿ ನೌಕರರು, ಅಧಿಕಾರಿಗಳು ಹೋರಾಡುತ್ತಿದ್ದಾರೆ. ಈ ಹೋರಾಟದಲ್ಲಿ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಬೇಕು. ಇಂದಿನ ತ್ಯಾಗ ನಾಳಿನ ಘನತೆ, ದಕ್ಷತೆ, ಸುರಕ್ಷತೆ ಮತ್ತು ಸೇವಾ ಗುಣಮಟ್ಟವನ್ನು ರಕ್ಷಿಸುತ್ತವೆ ಎಂದು ಹೇಳಿದರು.
ಕೆಜಿಬಿಒಎಫ್ ಅಧ್ಯಕ್ಷ ಲಿಂಗರಾಜ್ ರೊಡ್ಡನವರ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಾಗರ ಶಹಾ ಮಾತನಾಡಿದರು. ಕೆಜಿಬಿಇಎಫ್ ಅಧ್ಯಕ್ಷ ಅಂಬೇಕರ್, ಪ್ರಧಾನ ಕಾರ್ಯದರ್ಶಿ ಸಾಗರ ಜಾಧವ್, ಬ್ಯಾಂಕ್‌ನ ವಿವಿಧ ಶಾಖೆಗಳ ಸಿಬ್ಬಂದಿ, ಅಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಫೆಡರೇಶನ್ (ಕೆಜಿಬಿಒಎಫ್) ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಫೆಡರೇಶನ್ (ಕೆಜಿಬಿಇಎಫ್), ಕರ್ನಾಟಕ ಗ್ರಾಮೀಣ ಬ್ಯಾಂಕಿನ ನೌಕರರು ಜಂಟಿಯಾಗಿ ಪ್ರತಿಭಟನೆ ಸಂಘಟಿಸಿದ್ದು, ಎರಡು ದಿನಗಳ ಕಾಲ ಪ್ರತಿಭಟನೆ ನಡೆಯಲಿದೆ.