ಶ್ರೀಶೈಲ ಮಠದ
ಎಂಇಎಸ್ ಚುನಾವಣೆ ಅಖಾಡಕ್ಕಿಳಿಯುವುದರಿಂದ ಮರಾಠ ಮತಗಳು ವಿಭಜನೆಯಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃಣಾಲ್ ಹೆಬ್ಬಾಳಕರ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪೈಪೋಟಿಯೊಡ್ಡಲು ಸಜ್ಜಾಗಿದೆ. ಅಲ್ಲದೆ, ಒಮ್ಮತದ ಏಕೈಕ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ರಮಾಕಾಂತ ಕೊಂಡೊಸ್ಕರ್ ಮತ್ತು ಶುಭಂ ಶೆಳಕೆ ಹೆಸರು ಎಂಇಎಸ್‌ನಿಂದ ಪ್ರಮುಖವಾಗಿ ಕೇಳಿಬರುತ್ತಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಮರಾಠಿ ಮತ ಬೇಟೆಗೆ ಕೈ,ಕಮಲ ಪಡೆ ಶತಾಯಗತಾಯ ಪ್ರಯತ್ನ ಮಾಡುತ್ತಿವೆ. ಇಲ್ಲಿಯವರೆಗೆ ಹಿಂದುತ್ವಪರ ನಿಲುವು ಹೊಂದಿರುವ ಮರಾಠಿ ಭಾಷಿಕರು ಬಿಜೆಪಿಗೆ ಬೆಂಬಲ ನೀಡುತ್ತ ಬಂದಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಮತಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಲ್ಲಿ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಯಶಸ್ವಿಯಾಗಿದ್ದರು. ಆದರೆ, ವಿಧಾನಸಭಾ ಚುನಾವಣೆಯೇ ಬೇರೆ. ಲೋಕಸಭಾ ಚುನಾವಣೆಯೇ ಬೇರೆ. ವಿಧಾನಸಭಾ ಚುನಾವಣೆ ಸ್ಥಳೀಯ ವಿಷಯಾಧಾರಿತವಾಗಿ ನಡೆಯುತ್ತದೆ. ಆದರೆ, ಲೋಕಸಭಾ ಚುನಾವಣೆ ಕೇಂದ್ರದ ನಾಯಕತ್ವ, ದೇಶದ ವಿಷಯಗಳ ಮೇಲೆ ನಡೆಯುತ್ತದೆ.
ಬೆಳಗಾವಿ ಗಡಿ ವಿವಾದವನ್ನೇ ತನ್ನ ಬಂಡವಾಳ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಎಂಇಎಸ್ ಸಜ್ಜಾಗಿದೆ. ಈ ಹಿಂದಿನ ಎಲ್ಲ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿ, ತೀವ್ರ ಮುಖಭಂಗ ಅನುಭವಿಸಿದರೂ ಎಂಇಎಸ್ ಮಾತ್ರ ತನ್ನ ಹಳೆಯ ಚಾಳಿ ಬಿಡುತ್ತಿಲ್ಲ.ಮತ್ತೆ ಲೋಕಸಭಾ ಚುನಾವಣೆ ಆಖಾಡಕ್ಕೆ ಇಳಿಯಲು ಸಜ್ಜಾಗಿದೆ.
1996ರ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬರೋಬ್ಬರಿ 452 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೂ ತಲೆನೋವಾಗಿತ್ತು. ಚುನಾವಣಾ ಮತಪತ್ರ ಮುದ್ರಣ ಮಾಡುವುದೇ ಆಯೋಗಕ್ಕೆ ಸವಾಲಾಗಿತ್ತು. ಆಗ ಎರಡು ತಿಂಗಳಕಾಲ ಚುನಾವಣೆ ಮುಂದೂಡಲಾಗಿತ್ತು. ಈಗ ಮತ್ತೆ ಆ ದಾಖಲೆ ಮುರಿಯಲು 500 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿತ್ತು. ಗಲ್ಲಿಗೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿತ್ತು. ಆದರೆ, ಮರಾಠಿ ಭಾಷಿಕರೇ ಈ ನಿರ್ಧಾರಕ್ಕೆ ತೀವ್ರವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಒಮ್ಮತದ ಏಕೈಕ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದೆ.
ಕಾಂಗ್ರೆಸ್, ಬಿಜೆಪಿ ಈ ಎರಡೂ ರಾಷ್ಟ್ರೀಯ ಪಕ್ಷಗಳು ಎಂಇಎಸ್ ನಿರ್ಲಕ್ಷಿಸುವ ಸ್ಥಿತಿಯಲ್ಲಿಲ್ಲ. ಎಂಇಎಸ್ ಸ್ಪರ್ಧೆ ರಾಷ್ಟ್ರೀಯ ಪಕ್ಷಗಳ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮರಾಠಿ ಭಾಷಿಕ ಮತದಾರರು ಸಾಂಪ್ರದಾಯಿಕವಾಗಿ ಬಿಜೆಪಿ ಬೆಂಬಲಿಗರು. ಇಲ್ಲಿ ಎಂಇಎಸ್ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ತೀವ್ರ ಪೈಪೋಟಿಯೊಡ್ಡುತ್ತದೆ.
-ಮನೋಹರ ಕಿಣೇಕರ್, ಮಾಜಿ ಶಾಸಕರು.