ಗದಗ: ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದ್ದು, ಭೂಮಿಯ ಆಳದಲ್ಲಿ ಹೂತುಹೋಗಿದ್ದ ಪ್ರಾಚೀನ ಇತಿಹಾಸದ ಕುರುಹುಗಳು ಒಂದೊಂದಾಗಿ ಹೊರಬರುತ್ತಿವೆ. ಗುರುವಾರ ಲೋಹದ ಹಣತೆ ಮತ್ತು ಮೂಳೆ ಪತ್ತೆಯಾಗಿದೆ.
ಉತ್ಖನನ ಕಾರ್ಯದಲ್ಲಿ 35 ಜನ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಆದರೆ, ಮಣ್ಣು ಮತ್ತು ಕಲ್ಲಿನ ಕೆಲಸ ಮಾಡುವುದರಿಂದ ಕಾರ್ಮಿಕರ ಬೆರಳುಗಳು ಸವೆದುಹೋಗಿದ್ದು, ಬಯೋಮೆಟ್ರಿಕ್ ಮಷಿನ್‌ನಲ್ಲಿ ಹಾಜರಾತಿ ದಾಖಲಿಸಲು ಹೈರಾಣಾಗುತ್ತಿದ್ದಾರೆ. ಕೈಗಳನ್ನು ಕಲ್ಲು, ಮಣ್ಣಿಗೆ ಉಜ್ಜಿದರೂ ಬೆರಳಚ್ಚು ಮೂಡದ ಕಾರಣ ಕೊನೆಗೆ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆಯುವ ಮೂಲಕ ಸಮಸ್ಯೆ ಬಗೆಹರಿಸಿದ್ದಾರೆ.
ಪ್ರಜ್ವಲ ರಿತ್ತಿ ಕುಟುಂಬಕ್ಕೆ ನಿವೇಶನಭೂಮಿಯಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಬಾಲಕ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯಿತಿಯು ಗ್ರಾಮದ ಮಾರುತಿ ನಗರದಲ್ಲಿ 30x40 ಅಳತೆಯ ನಿವೇಶನ ನೀಡಲು ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಿದೆ.
ಬಾಲಕ ಪ್ರಜ್ವಲ್ ವಯಸ್ಕನಾದ ಮೇಲೆ ಅವನಿಗೆ ನೌಕರಿ ನೀಡುವ ಬಗ್ಗೆ ಮತ್ತು ಮನೆ ಕಟ್ಟಲು ವಿಶೇಷ ಅನುದಾನಕ್ಕೆ ಸಚಿವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಮಕ್ಕಳಲ್ಲಿ ಪ್ರಾಮಾಣಿಕತೆ ಬೆಳೆಸಲು ಏಳು ಶಾಲೆಗಳಲ್ಲಿ ಪ್ರಜ್ವಲ್ ಭಾವಚಿತ್ರ ಅಳವಡಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಕುಟುಂಬಸ್ಥರಿಗೆ ಸಂತಸ ಉಂಟು ಮಾಡಿದೆ.