ಬಳ್ಳಾರಿ: ನುಡಿ ಚಿತ್ರಕಾರನಿಗೆ ಸೃಜನಶೀಲ ಬರವಣಿಗೆ ಮತ್ತು ರೂಪಕದ ಭಾಷೆ ಬಹಳ ಮುಖ್ಯ ಎಂದು ಕಾಸರಗೋಡಿನ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ ಹೇಳಿದರು. ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಪತ್ರಿಕೋದ್ಯಮ ವಿಭಾಗಗಳ ವತಿಯಿಂದ ಆಯೋಜಿಸಿದ್ದ ನುಡಿ ಚಿತ್ರ ಬರಹ ಸೂತ್ರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖುಶವಂತ್ ಸಿಂಗ್, ರಸ್ಕಿನ್ ಬಾಂಡ್, ನಾಗೇಶ್ ಹೆಗಡೆ, ಶ್ರೀ ಪಡ್ರೆ ಮುಂತಾದವರು ನುಡಿ ಚಿತ್ರಗಳ ಮೂಲಕ ಹೆಸರಾದವರು. ಮನಸ್ಸಿನಲ್ಲಿ ತರಂಗ ಎಬ್ಬಿಸುವ,ಅನುಭವಗಳನ್ನು ದಾಖಲಿಸುವ ಈ ಬರವಣಿಗೆಗೆ ಸೂಕ್ತ ಸಿದ್ಧತೆ ಬೇಕು. ಆಗ ಮಾತ್ರ ಸುಲಭವಾಗಿ ನುಡಿ ಸೂತ್ರ ಹಿಡಿಯಲು ಸಾಧ್ಯ ಎಂದರು.
ಕನ್ನಡ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳಲ್ಲಿ ಬರುವ ನುಡಿ ಚಿತ್ರಗಳನ್ನು ಹೆಚ್ಚೆಚ್ಚು ಓದಬೇಕು. ಭಾಷೆಯ ಮೇಲೆ ಹಿಡಿತ ಸಾಧಿಸಬೇಕು. ಈ ತೆರನಾದ ಬರವಣಿಗೆ ಮುಂದೆ ಸಂಶೋಧನಾ ಬರವಣಿಗೆಗೂ ಸಹಕಾರಿಯಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಪ್ರಹ್ಲಾದ ಚೌದ್ರಿ ನುಡಿ ಚಿತ್ರದ ಬರವಣಿಗೆಗೆ ಉತ್ತಮ ಕೌಶಲ್ಯ,ಕ್ರಿಯಾಶೀಲ ಮನೋಭಾವ, ಪ್ರತಿಭೆ ಹಾಗೂ ಸಮಾಜಮುಖಿ ಚಿಂತನೆ ಬೇಕು ಎಂದರು.
ವೇದಿಕೆಯ ಮೇಲೆ ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಜಯರಾಮ, ಸಿ.ಮಂಜುನಾಥ ಇದ್ದರು.