ಸಾಲಾಗಿ ಸಾಯ್ತಿದ್ದಾರೆ, ಯಾಕಂತ ಗೊತ್ತಾಗ್ತಿಲ್ಲ!

KannadaprabhaNewsNetwork |  
Published : Apr 21, 2025, 12:48 AM IST
ಕೈಗಾರಿಕೆಗಳ ಆಗಮನದ ನಂತರ ಅಲ್ಲಿನ ಬದಲಾದ ಸನ್ನಿವೇಶಗಳ ಕುರಿತು ಸಂಗ್ವಾರ ಗ್ರಾಮಸ್ಥರ ಮಾತುಕತೆ | Kannada Prabha

ಸಾರಾಂಶ

"ಕಳೆದ ಈ ಒಂದು ವರ್ಷದಲ್ಲಿ ನಮೂರಿನ ಕೆಲವರು ಕಿಡ್ನಿ ಬಾವಿನಿಂದ, ಲಿವರ್‌ ಸಮಸ್ಯೆಯಿಂದ, ಉಸಿರಾಟದಿಂದ ಸತ್ತು ಹೋದರು. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ನಾವ್ಯಾರೂ ಅಂಥಾ ಜಡ್ಡಿನ ಹೆಸರುಗಳ ಕೇಳಿರಲಿಲ್ಲ, ದೊಡ್ಡ ಕಾಯಿಲೆಗಳು ನಮ್ಮವರನ್ನ ಸದ್ದಿಲ್ಲದೆ ಸಾಲು ಸಾಲಾಗಿ ಸಾಯಿಸ್ತಿದೆ. ಅದ್ಯಾಕೋ ಗೊತ್ತಾಗ್ತಿಲ್ಲ..

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

"ಕಳೆದ ಈ ಒಂದು ವರ್ಷದಲ್ಲಿ ನಮೂರಿನ ಕೆಲವರು ಕಿಡ್ನಿ ಬಾವಿನಿಂದ, ಲಿವರ್‌ ಸಮಸ್ಯೆಯಿಂದ, ಉಸಿರಾಟದಿಂದ ಸತ್ತು ಹೋದರು. ಇತ್ತೀಚಿನ ನಾಲ್ಕೈದು ವರ್ಷಗಳಲ್ಲಿ ನಾವ್ಯಾರೂ ಅಂಥಾ ಜಡ್ಡಿನ ಹೆಸರುಗಳ ಕೇಳಿರಲಿಲ್ಲ, ದೊಡ್ಡ ಕಾಯಿಲೆಗಳು ನಮ್ಮವರನ್ನ ಸದ್ದಿಲ್ಲದೆ ಸಾಲು ಸಾಲಾಗಿ ಸಾಯಿಸ್ತಿದೆ. ಅದ್ಯಾಕೋ ಗೊತ್ತಾಗ್ತಿಲ್ಲ..! ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕಂಟಿಕೊಂಡಂತೆ ಇರುವ, ಸಂಗ್ವಾರ ಗ್ರಾಮಕ್ಕೆ ಭೇಟಿ ನೀಡಿದ "ಕನ್ನಡಪ್ರಭ "ದೆದುರು ಅಲ್ಲಿನ ಮರೆಪ್ಪ ಈ ರೀತಿ ಹೇಳುತ್ತಿರುವಾಗ, ದೇವಸ್ಥಾನದ ಜಗುಲಿ ಕಟ್ಟೆಯ ಮೇಲೆ ಕುಳಿತಿದ್ದವರು ಹೌದೌದು ಎಂದು ಗುಣುಗುಡುತ್ತಿದ್ದರೆ ತಿಂಗಳ ಹಿಂದಷ್ಟೇ ವಿಚಿತ್ರ ರೋಗಕ್ಕೆ ಪತ್ನಿ ಚೆನ್ನಮ್ಮಳನ್ನು ಕಳೆದುಕೊಂಡಿದ್ದ ಕರಿಯಪ್ಪ, ಮರೆಪ್ಪನ ಮಾತುಗಳಿಗೆ ಮೌನದಲ್ಲೇ ತಲೆಯಾಡಿಸುತ್ತಿದ್ದರು. "ನಮ್ಮೂರವರಿಗೆ ಕಿಡ್ನಿ ಜಡ್ಡು ಅಂದರೆನೇ ಗೊತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಿಡ್ನಿ ಬಾವು ಅನ್ನೋ ಕಾಯಿಲೆ ನಮಗೆಲ್ಲ ಎದೆ ಝಲ್ಲೆನ್ನಿಸುತ್ತಿದೆ. ಕೆಲವರು ಡಯಾಲಿಸಿಸ್‌ ಮಾಡಿಸಿಕೊಂಡರಾದರೂ ಬಹಳ ದಿನ ಬದುಕುಳಿಯಲಿಲ್ಲ. ದುಡ್ಡಿಲ್ಲದವರು ಚಿಕಿತ್ಸೆಗೆ ಪರದಾಡಿ ಸತ್ತರು, ಇಂತಹ ರೋಗಗಳು ನಮ್ಮ ಭಾಗದಲ್ಲಿ ಮೊದಲಿಗೇನೂ ಕಂಡು ಬರುತ್ತಿರಲಿಲ್ಲ ಎಂದೆನ್ನುವ ಸಂಗ್ವಾರದ ಮರೆಪ್ಪ, ಹೀಗ್ಯಾಕೆ ಆಗ್ತಿದೆಯೋ ನಮಗೆ ಗೊತ್ತಿಲ್ಲ. ಗಾಳಿಯೋ, ನೀರೋ ಏನೂ ತಿಳೀವಲ್ದು.. " ಎಂದು ಸಂಕಟ ಪಡುತ್ತಾರೆ.

ಬಾಡಿಯಾಳ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಸಂಗ್ವಾರ ಗ್ರಾಮಸ್ಥರ ಜಮೀನುಗಳು ಮೊದಲ ಹಂತದಲ್ಲಿ ಸ್ವಾಧೀನಕ್ಕೆ ಒಳಪಟ್ಟಿಲ್ಲವಾದರೂ 3269 ಹೆಚ್ಚುವರಿ ಎಕರೆಗಾಗಿನ 2ನೇ ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಮೊದಲಿಗೆ ಭೂಮಿ ಹೋಗಿಲ್ಲ ಎಂದು ನಿಟ್ಟುಸಿರು ಬಿಟ್ಟರಾದರೂ, ಸಂಜೆಯಾದರೆ ಸಾಕು ಇಡೀ ಸಂಗ್ವಾರ ಗ್ರಾಮವನ್ನೇ ಆಪೋಷನ ತೆಗೆದುಕೊಳ್ಳುವ ತ್ಮಿಕಲ್‌ ದುರ್ನಾತ- ತ್ಯಾಜ್ಯ ಘಾಟಿನಿಂದ ಉಸಿರುಗಟ್ಟಿ ಸಾಯುವ ನರಕಯಾತನೆಯ ಅನುಭವವಾಗುತ್ತಿದೆಯಂತೆ. "ಕಿಡ್ನಿ ಕಾಯಿಲೆಯಿಂದ ತಂದೆಯನ್ನು ಕಳೆದುಕೊಂಡ ಇದೇ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್‌, ಅದ್ಯಾಕೋ ಗೊತ್ತಿಲ್ಲ, ಇತ್ತೀಚಿನ ವರ್ಷಗಳಿಂದ ಕಿಡ್ನಿ ಸಂಬಂಧೀ ಕಾಯಿಲೆಗಳು ಇಲ್ಲಿನವರಿಗೆ ವಕ್ಕರಿಸುತ್ತಿವೆ. ಹಾಗೆಯೇ, ಮಕ್ಕಳು- ಯುವಕರು, ಮಹಿಳೆಯರು ಸೇರಿದಂತೆ ಅನೇಕರಿಗೆ ಅಸ್ತಮಾ ಕೆಮ್ಮು ಕಾಡುತ್ತಿದೆ. 12 ತಿಂಗಳದೊಳಗಿನ ಹಸುಗೂಸಿಗೂ ಇಂತಹ ರೋಗಗಳು ಕಾಡುತ್ತಿದೆ ಎಂದು ನಾಗರಾಜ್‌ ಆತಂಕ ವ್ಯಕ್ತಪಡಿಸಿದರು. ಸಂಗ್ವಾರ್ ಗ್ರಾಮದ ಅನಂತರಾವ್‌, ಸಿದ್ಧಪ್ಪ, ಬಾಲಪ್ಪ, ಶರಣಪ್ಪ, ಹನುಮಂತ ಅನೇಕರು, ಕಳೆದೈದು ವರ್ಷಗಳಿಂದ ಸದ್ದಿಲ್ಲದೆ ಅಲ್ಲಿನ ಪರಿಸರಕ್ಕಾಗುತ್ತಿರುವ ಧಕ್ಕೆ, ಪಕ್ಷಿ-ಪ್ರಾಣಿ ಸಂಕುಲಗಳ ಕಣ್ಮರೆ, ಗ್ರಾಮಸ್ಥರ ಕಾಡುತ್ತಿರುವ ವಿಚಿತ್ರ ಕಾಯಿಲೆಗಳ ಬಗ್ಗೆ "ಕನ್ನಡಪ್ರಭ "ದೆದು ಹೇಳುತ್ತಿರುವ ಅವರ ಕಣ್ಗಳಲ್ಲಿ ಆತಂಕ-ನೋವು-ಸಂಕಟ ಮನೆ ಮಾಡಿತ್ತು.

ಆರೋಗ್ಯ ತಪಾಸಣೆ, ಹೆಲ್ತ್‌ ಕ್ಯಾಂಪುಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರೆಲ್ಲ, ವರ್ಷಕ್ಕೊಮ್ಮೆ ಬರುವ ಅವರು ಅದೇನೋ ಟಾರ್ಗೆಟ್‌ ಇರ್ತದೆ ಅಂತ ಚೆಕ್‌ ಮಾಡಿ, ಹೋಗ್ತಾರೆ. ಆಮೇಲೆ, ಏನಾಗ್ತದೋ ಗೊತ್ತಿಲ್ಲ ಎಂದು ಹನುಮಂತ ಬೇಸರ ವ್ಯಕ್ತಪಡಿಸಿದರು. ಸಂಜೆಯಾಗುತ್ತಿದ್ದಂತೆಯೇ ದುರ್ನಾತದ ಸಂಜ್ಞೆ ಸಿಗುತ್ತಿದ್ದಂತೆಯೇ ಒಬ್ಬೊಬ್ಬರಾಗಿ ದೇವಸ್ಥಾನದ ಜಗಲೀ ಕಟ್ಟೆಯಿಂದ ಮನೆಯತ್ತ ಧಾವಂತದ ಹೆಜ್ಜೆ ಹಾಕತೊಡಗಿದ್ದರು.ಕೈಗಾರಿಕೆಗಳು ಬರುವ ಐದಾರು ವರ್ಷಗಳ ಮುನ್ನ ನೆಮ್ಮದಿಯಾಗಿಯೇ ಇದ್ದ ಸಂಗ್ವಾರದ ಗ್ರಾಮ ಸೇರಿದಂತೆ ಕೈಗಾರಿಕಾ ವಲಯದ ಈ ಭಾಗದ ಜಲ-ಜೀವನ, ಆರೋಗ್ಯ, ಕೃಷಿ- ಪರಿಸರ- ಪ್ರಾಣಿ ಪಕ್ಷಿ ಸಂಕುಲದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು 3-6 ತಿಂಗಳಿಗೆ ಅಧ್ಯಯನ ನಡೆಸಿ, ಪರಿಹಾರ ಕಾರ್ಯಗಳ ಬಗ್ಗೆ ಚಿಂತನ-ಮಂಥನ ನಡೆಸಬೇಕಾದ ಸರ್ಕಾರ-ಆಡಳಿತ, ಮುಗುಮ್ಮಾಗಿರುವುದು ಮನುಕುಲದ ಸದ್ದಿಲ್ಲದ ಸಾವಿನ ರಹಸ್ಯಗಳನ್ನು ಮುಚ್ಚಿ ಹಾಕುತ್ತಿರುವಂತಿದೆ. -

ಈ ಒಂದು ವರ್ಷದಲ್ಲಿ ಏನಿಲ್ಲ ಅಂದರೂ ನಾಲ್ಕೈದು ಜನ ಅದ್ಯಾವ್ದೋ ಕಿಡ್ನಿ ಬಾವಿನಿಂದ ಸತ್ತರೆ ಕರುಳು ಬಾವು, ಉಸಿರಾಟದ ಸಮಸ್ಯೆಯಿಂದಲೂ ಕೆಲವರು ಜೀವ ಬಿಟ್ಟಿದ್ದಾರೆ.

ಮರೆಪ್ಪ, ಸಂಗ್ವಾರ ಗ್ರಾಮಸ್ಥ

"ನನ್ನ ಮಗನಿಗೂ ಅಸ್ತಮಾ, ಕೆಮ್ಮು ದಮ್ಮಿನಿಂದ ರಾಯಚೂರು ಆಸ್ಪತ್ರೆಗೆ ತೋರಿಸಿ, ಅಡ್ಮಿಟ್‌ ಮಾಡಿದ್ದೆ. ಇಲ್ಲಿ ನರಕಯಾತನೆಯ ಅನುಭವ ಆಗ್ತಿದೆ.

ನಾಗರಾಜ್‌, ಗ್ರಾಮ ಪಂಚಾಯತ್‌ ಸದಸ್ಯ, ಸಂಗ್ವಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ
ದೈವಾರಾಧನೆ ಬಗ್ಗೆ ಮಾತಿನಲ್ಲಿ ಎಚ್ಚರ ಇರಲಿ: ಸುರೇಶ್‌ ನಾವೂರು